ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಟಾಟಾ ಕಂಪನಿ ಪ್ರವೇಶಕ್ಕೆ ಸಿಪಿಐ(ಎಂ) ವಿರೋಧ



ಉಡುಪಿ: ರಾಜ್ಯದ 15 ಜಿಲ್ಲೆಗಳ ವಿದ್ಯುತ್ ವಿತರಣೆಗೆ ಅನುಮತಿ ಕೋರಿ ದಿ ಟಾಟಾ ಪವರ್ ಕಂಪೆನಿ ಲಿ., ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ (ಕೆಇಆರ್ಸಿ) ಅರ್ಜಿ ಸಲ್ಲಿಸಿದ್ದು ಇದು ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರವಾಗಿದೆ. ಆದ್ದರಿಂದ ಟಾಟಾ ಕಂಪನಿಯ ಕೋರಿಕೆಯನ್ನು ತಿರಸ್ಕರಿಸಬೇಕೆಂದು ಉಡುಪಿ ಜಿಲ್ಲಾ ಪಕ್ಷದ ಕಚೇರಿಯಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ಉಡುಪಿ ಜಿಲ್ಲಾ ಸಮಿತಿ ಕೆ.ಇ.ಆರ್.ಸಿ. ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ ಮತ್ತು ಹೆಸ್ಕಾಂ ವ್ಯಾಪ್ತಿಯ 15 ಜಿಲ್ಲೆಗಳಲ್ಲಿ 2003ರ ವಿದ್ಯುತ್ ಕಾಯ್ದೆ ಸೆಕ್ಷನ್ 14 ಹಾಗೂ 15ರ ಅಡಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕೆ.ಇ.ಆರ್.ಸಿ.ಗೆ ದಿ ಟಾಟಾ ಪವರ್ ಕಂಪನಿ ಅರ್ಜಿ ಸಲ್ಲಿಸಿದೆ. ಇದು ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳು ಹಸ್ತಾಂತರ ಮಾಡಿಕೊಳ್ಳುವ ಷಡ್ಯಂತ್ರದ ಭಾಗವಾಗಿದೆ.

 

ನರೇಂದ್ರ ಮೋದಿ ನಾಯಕತ್ವದ ಒಕ್ಕೂಟ ಸರ್ಕಾರ ಮಾಡಿರುವ ವಿದ್ಯುತ್ ತಿದ್ದುಪಡಿ ಮಸೂದೆಯ ಅಂಶಗಳನ್ನು ಉಪಯೋಗಿಸಿಕೊಳ್ಳಲು ಇಂತಹ ಪ್ರಯತ್ನಕ್ಕೆ ಖಾಸಗಿ ಕಂಪನಿಗಳು ಮುಂದಾಗಿವೆ. ಕೆ.ಇ.ಬಿ.ಯನ್ನು ವಿಭಜನೆ ಮಾಡಿ ವಿದ್ಯುತ್ ವಿತರಣಾ ಕಂಪನಿಗಳನ್ನು ಮಾಡಿದಾಗಲೇ, ಇದು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರವಾಗಿದೆ ಎಂದು ಸಿಪಿಐ(ಎಂ) ಪಕ್ಷವು ಎಚ್ಚರಿಕೆಯನ್ನು ನೀಡಿತ್ತು. ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಹಲವಾರು ಖಾಸಗಿ ಕಂಪನಿಗಳು ಪ್ರವೇಶ ಪಡೆದುಕೊಳ್ಳುವುದು ಮಾತ್ರವಲ್ಲ, ವಿದ್ಯುತ್ ಉತ್ಪಾದನೆ, ಸಾಗಾಣಿಕೆ ಮತ್ತು ವಿತರಣೆ ಈ ಮೂರು ಆಯಾಮಗಳಲ್ಲೂ ಖಾಸಗೀಕರಣ ಮಾಡುವ ಉದ್ದೇಶದಿಂದಲೇ ʼವಿದ್ಯುತ್ ತಿದ್ದುಪಡಿ ಮಸೂದೆ-2025ʼನ್ನು ಕೇಂದ್ರ ಬಿಜೆಪಿ ಸರ್ಕಾರ ಅಂಗೀಕರಿಸಿದೆ. ಒಂದೇ ವಿದ್ಯುತ್ ವಿತರಣಾ ಪ್ರದೇಶದಲ್ಲಿ ಹಲವು ವಿತರಣಾ ಕಂಪನಿಗಳಿಗೆ ಅವಕಾಶ ನೀಡುವುದು, ವಿದ್ಯುತ್ ದರಗಳನ್ನು ವಿಪರೀತವಾಗಿ ಹೆಚ್ಚಿಸುವುದು, ಕ್ರಾಸ್-ಸಬ್ಸಿಡಿಗಳನ್ನು ರದ್ದು ಮಾಡುವುದು, ಮುಂತಾದ ಅಂಶಗಳನ್ನು ಇದು ಒಳಗೊಂಡಿದೆ. ರಾಜ್ಯಗಳ ವಿದ್ಯುತ್ ಸ್ವಾಯತ್ತತೆಯನ್ನು ಇದು ಸಂಪೂರ್ಣವಾಗಿ ನಾಶ ಮಾಡುತ್ತದೆ.

ಸಾರ್ವಜನಿಕ ವಿದ್ಯುತ್ ಕ್ಷೇತ್ರ ಸರ್ಕಾರವು ಜನತೆಗೆ ನಿರ್ವಹಿಸಬೇಕಾಗಿರುವ ಭಾಧ್ಯತೆಯನ್ನು ಒಳಗೊಂಡಿದೆ. ಟಾಟಾ ಕಂಪನಿಯಂತಹ ಖಾಸಗಿ ಕಾರ್ಪೊರೇಟುಗಳು ಪ್ರವೇಶ ಮಾಡಿದರೆ, ಸರ್ಕಾರಗಳು ಈ ಭಾಧ್ಯತೆಯನ್ನು ಕಳಚಿಕೊಳ್ಳುತ್ತವೆ. ಇದರಿಂದ ಗೃಹ ಬಳಕೆದಾರರು, ಸಾರ್ವಜನಿಕರು, ಸಣ್ಣ ರೈತರು, ಪಂಪಸೆಟ್ ಬಳಕೆದಾರರು, ಸಣ್ಣ ಕೈಗಾರಿಕೆಗಳು ತೀವ್ರವಾದ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಉದ್ಯೋಗದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ ವಿದ್ಯುತ್ ವಿತರಣಾ ವಲಯಕ್ಕೆ ಟಾಟಾ ಕಂಪನಿ ಪ್ರವೇಶ ನೀಡಬಾರದು. ಕೆ.ಇ.ಆರ್.ಸಿ. ಮತ್ತು ರಾಜ್ಯ ಸರ್ಕಾರ ಇಂತಹ ಪ್ರಯತ್ನಗಳನ್ನು ತಡೆ ಹಿಡಿಯಬೇಕು. ಕರ್ನಾಟಕದ ಜನತೆ ಇಂತಹ ಪ್ರಯತ್ನಗಳನ್ನು ವಿರೋಧಿಸಬೇಕೆಂದು ಪಕ್ಷದ ರಾಜ್ಯ ಸಮಿತಿ ಸಿಪಿಐ(ಎಂ)  ಕರೆ ನೀಡಿದೆ. ಇದರ ವಿರುದ್ಧ ತೀವ್ರವಾದ ಹೋರಾಟಗಳನ್ನು ನಡೆಸಲು ಸಿಪಿಐ(ಎಂ) ತೀರ್ಮಾನಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.