ಮುಖ್ಯಮಂತ್ರಿ ಡಿಕೆಶಿಗೆ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಆಹ್ವಾನ



ಉಡುಪಿ: ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಜಯಕೃಷ್ಣ ಎ. ಶೆಟ್ಟಿ ಮತ್ತು ಸಮಿತಿಯ ರಾಜ್ಯಾಧ್ಯಕ್ಷ ಕೆ.ಪಿ. ಜಗದೀಶ್ ಅಧಿಕಾರಿ ಅವರು ಜೂ. 4ರಂದು ಬೆಂಗಳೂರಿನ ಕಚೇರಿಯಲ್ಲಿ ಮುಖ್ಯಮಂತ್ರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಆ. 20ರಂದು ನಡೆಯಲಿರುವ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ರಜತ ಮಹೋತ್ಸವಕ್ಕೆ ಆಹ್ವಾನಿಸಿದರು. ಮುಖ್ಯಮಂತ್ರಿಯವರು ಕಾರ್ಯಕ್ರಮಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ಸಮಿತಿಯ ಕಳೆದ 25 ವರ್ಷಗಳ ಸಮಾಜಮುಖಿ ಹಾಗೂ ಪರಿಸರಪರ ಸೇವೆಗಳನ್ನು ಶ್ಲಾಘಿಸಿ, ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ತಮಗೆ ಸಂಪೂರ್ಣ ಅರಿವು ಇದೆ ಎಂದು ತಿಳಿಸಿದರು. ಸಮಿತಿಯ ಆಹ್ವಾನವನ್ನು ತಕ್ಷಣವೇ ಸ್ವೀಕರಿಸಿದ ಅವರು, “ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬದಲ್ಲಿ ಭಾಗವಹಿಸುವುದು ನನಗೆ ಸಂತೋಷದ ವಿಷಯ” ಎಂದು ಹೇಳಿದರು.

ಕಳೆದ 25 ವರ್ಷಗಳಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ (ಉಡುಪಿ ಹಾಗೂ ಮಂಗಳೂರು) ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಸರ ಸಂರಕ್ಷಣೆ, ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ ವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿ ವಿಚಾರಗಳಲ್ಲಿ ಸಮಿತಿಯು ಮಹತ್ವದ ಕೊಡುಗೆ ನೀಡಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯ ಕಲ್ಪಿಸಲು ರನ್‌ವೇ ವಿಸ್ತರಣೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ, ನಂದಿಕೂರಿನ ವಿದ್ಯುತ್ ಯೋಜನೆ ಅನುಷ್ಠಾನ, ಮಂಗಳೂರು–ಬೆಂಗಳೂರು ರೈಲು ಮಾರ್ಗದ ಬ್ರಾಡ್ ಗೇಜ್ ಪರಿವರ್ತನೆ ಹಾಗೂ ಪುನರಾರಂಭ, ಮಂಗಳೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥೀಕರಣ ಸೇರಿದಂತೆ ಹಲವಾರು ಪ್ರಮುಖ ಅಭಿವೃದ್ಧಿ ಕಾರ್ಯಗಳಲ್ಲಿ ಸಮಿತಿಯು ಸಕ್ರಿಯ ಪಾತ್ರವಹಿಸಿದೆ.

ಇದಲ್ಲದೆ, ಮಾಜಿ ರಕ್ಷಣಾ ಸಚಿವ ಹಾಗೂ ಎನ್‌ಡಿಎ ಸಂಚಾಲಕರಾಗಿದ್ದ ಪದ್ಮವಿಭೂಷಣ ದಿವಂಗತ ಜಾರ್ಜ್ ಫರ್ನಾಂಡಿಸ್ ಹಾಗೂ ವಿವಿಧ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮುಂಬಯಿ–ಮಂಗಳೂರು ಗರೀಬ್ ರಥ್ ರೈಲು ಸೇವೆ ಆರಂಭಿಸುವಲ್ಲಿಯೂ ಸಮಿತಿಯ ಪ್ರಯತ್ನಗಳು ಗಮನಾರ್ಹವಾಗಿವೆ.