ಬಿಜೆಪಿ ಶಾಸಕರಿಂದ ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ: ಆಣೆ ಪ್ರಮಾಣಕ್ಕೆ ಸಿದ್ಧತೆ !

 


ಬೆಂಗಳೂರು: ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಶಾಸಕರ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ರಾಜ್ಯ ಬಿಜೆಪಿ ನಾಯಕರಿಗೆ ದೊಡ್ಡ ತಲೆಬಿಸಿಯಾಗಿ ಪರಿಣಮಿಸಿದೆ. ಈ ಕುರಿತು ಹೈಕಮಾಂಡ್ ವರದಿ ಕೇಳಿರುವುದರಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ರಾಜ್ಯ ನಾಯಕರು, ಗೆರೆ ದಾಟಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಈಗ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೊರೆ ಹೋಗಲು ನಿರ್ಧರಿಸಿದ್ದಾರೆ. 

ಪಕ್ಷದಲ್ಲೇ ಇದ್ದುಕೊಂಡು ದ್ರೋಹ ಬಗೆದವರನ್ನು ಪತ್ತೆ ಹಚ್ಚಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಈಗಾಗಲೇ ಕ್ರಾಸ್ ವೋಟಿಂಗ್ ಪತ್ತೆಗೆ ಸಮಿತಿಯೊಂದನ್ನು ರಚಿಸಲಾಗಿದೆಯಾದರೂ, ಸಂಶಯಾಸ್ಪದ ಶಾಸಕರು ತಾವು ಅಡ್ಡ ಮತದಾನ ಮಾಡಿಲ್ಲ ಎಂದು ವಾದಿಸುತ್ತಿದ್ದಾರೆ.

ಹೀಗಾಗಿ, ಸತ್ಯ ಹೊರಹಾಕಲು ಧರ್ಮಸ್ಥಳದಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ತುರ್ತು ಸಭೆಯನ್ನು ನಿಗದಿಪಡಿಸಲಾಗಿದೆ. ಎಲ್ಲಾ ಶಾಸಕರನ್ನು ಧರ್ಮಸ್ಥಳಕ್ಕೆ ಕರೆದೊಯ್ದು, "ನಾವು ಅಡ್ಡ ಮತದಾನ ಮಾಡಿಲ್ಲ" ಎಂದು ಮಂಜುನಾಥ ಸ್ವಾಮಿಯ ಮುಂದೆ ಆಣೆ ಪ್ರಮಾಣ ಮಾಡಿಸಲು ಹಿರಿಯ ನಾಯಕರು ಸಿದ್ಧತೆ ನಡೆಸಿದ್ದಾರೆ.