ಉಡುಪಿ: ಬಾರ್ ಮಾಲೀಕರಿಗೆ ಅಗ್ನಿ ಸುರಕ್ಷತೆ ಕಡ್ಡಾಯವಾಗಿ ಅಳವಡಿಸುವಂತೆ ಮತ್ತು ನಿಯಮ ಪಾಲನೆ ಮಾಡುವಂತೆ ಅಬಕಾರಿ ಇಲಾಖೆ ಎಚ್ಚರಿಕೆ

 


ಉಡುಪಿ: ಮೈಸೂರಿನ ಬಾರ್ ಒಂದರಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಉಡುಪಿ ಅಬಕಾರಿ ಇಲಾಖೆ ವತಿಯಿಂದ ಜಿಲ್ಲೆಯ ಸನ್ನದುದಾರರು ಹಾಗೂ ಬಾರ್ ಮಾಲೀಕರಿಗೆ ಅಗ್ನಿ ಸುರಕ್ಷತೆ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸಲಾಯಿತು.

ಅಬಕಾರಿ ಇಲಾಖೆ ಆವರಣದಲ್ಲಿ ನಡೆದ ಕಾರ್ಯಗಾರದಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಭಾಗವಹಿಸಿ, ಬೆಂಕಿ ಅವಘಡಗಳನ್ನು ತಡೆಗಟ್ಟುವ ಕ್ರಮಗಳು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಪ್ರತಿಯೊಂದು ಬಾರ್‌ನಲ್ಲಿ ಅಗ್ನಿ ಅವಘಡ ತಡೆಗಟ್ಟುವ ಪರಿಕರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಗ್ರಾಹಕರಿಗೆ ಸುಲಭವಾಗಿ ಕಾಣುವ ಸ್ಥಳಗಳಲ್ಲಿ ಅಗ್ನಿ ನಿರೋಧಕ ಸಾಧನಗಳನ್ನು ಇರಿಸಬೇಕು ಎಂದು ಸೂಚಿಸಲಾಯಿತು. ನಿಯಮಗಳ ಪಾಲನೆ ಕುರಿತು ಇಲಾಖೆ ಪರಿಶೀಲನೆ ನಡೆಸಲಿದ್ದು, ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.


ಈ ಕುರಿತು ಮಾಹಿತಿ ನೀಡಿದ ಅಬಕಾರಿ ಡಿಸಿ , ಟಿ.ಎಂ. ಶ್ರೀನಿವಾಸ್, ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಪ್ರತಿಯೊಬ್ಬ ಸನ್ನದುದಾರನ ಜವಾಬ್ದಾರಿ.ಇದೇ ವೇಳೆ, ಜಿಲ್ಲೆಯ ಕೆಲ ಬಾರ್‌ಗಳು ನಿಗದಿತ ಅವಧಿಗೂ ಮುನ್ನ ಹಾಗೂ ಅವಧಿ ಮೀರಿ ಕಾರ್ಯನಿರ್ವಹಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಕಳೆದ ಒಂದು ವರ್ಷದಲ್ಲಿ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು. ನಿಗದಿತ ಸಮಯದ ಹೊರತಾಗಿ ಬಾರ್‌ಗಳನ್ನು ನಡೆಸದಂತೆ ಮಾಲೀಕರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.

ಹಲವು ಬಾರ್‌ಗಳಲ್ಲಿ ಮದ್ಯದ ದರದಲ್ಲಿ ವ್ಯತ್ಯಾಸ ಮಾಡಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ದೂರುಗಳು ಬಂದಿದ್ದು, ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ದರದಂತೆ ಮಾತ್ರ ಗ್ರಾಹಕರಿಂದ ಹಣ ಪಡೆಯಬೇಕು. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜುಲೈ ತಿಂಗಳಿಂದ ಮದ್ಯ ಮಾರಾಟ ಪರವಾನಗಿ (ಲೈಸೆನ್ಸ್) ನವೀಕರಣ ಪ್ರಕ್ರಿಯೆ ಆರಂಭವಾಗಲಿದ್ದು, ಈ ಬಾರಿ ಸಮಗ್ರ ಪರಿಶೀಲನೆ ನಡೆಸಿದ ಬಳಿಕವೇ ನವೀಕರಣಕ್ಕೆ ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದರು.