ಉಡುಪಿ: ಕಳೆದ ಹಲವು ದಿನಗಳಿಂದ ಪರವಾನಿಗೆ ಭೂಮಾಪಕರ ಮುಷ್ಕರ ನಡೆಯುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಕೆಲಸಗಳು ಆಗುತ್ತಿಲ್ಲ. ಅವರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡದ ಸರಕಾರ ಜೀವಂತ ಇದೆಯಾ ಅಥವಾ ಸತ್ತಿದೆಯಾ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು , ಕಂದಾಯ ಮಂತ್ರಿಯಾಗಿ ಕೃಷ್ಣ ಭೈರೇಗೌಡ ಬಂದಾಗ ಸಾಕಷ್ಟು ಭರವಸೆ ಮೂಡಿಸಿದ್ದರು.ಆದರೆ ಈಗ ಅದು ಹುಸಿಯಾಗಿದೆ.ಇವತ್ತು ಕಂದಾಯ ಸಂಬಂಧಿ ಕೆಲಸಗಳಿಗೆ ಜನರು ತಾಲೂಕು ಕಚೇರಿಗಳಿಗೆ ಅಲೆದಾಡುವಂತಾಗಿದೆ.ಖಾತೆ ಬದಲಾವಣೆಯಂತಹ ಸಣ್ಣ ಕೆಲಸಗಳೂ ಆಗುತ್ತಿಲ್ಲ.ಆದರೂ ಸರಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಮಂಜುನಾಥ ಗಿಳಿಯಾರು ಹೇಳಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬಹುತೇಕ ಒಂದೇ ಪಕ್ಷದ ಶಾಸಕರಿದ್ದಾರೆ.ಅವರೂ ಕೂಡ ಭೂಮಾಪಕರ ಸಮಸ್ಯೆ ಬಗೆಹರಿಸುವ ಮೂಲಕ ಜನರ ನೆರವಿಗೆ ಇನ್ನೂ ಬಂದಿಲ್ಲ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ದಲಿತ ಸಂಘರ್ಷ ಸಮಿತಿ ಜನರ ನೆರವಿಗೆ ಬರಲಿದೆ.ಪ್ರತಿಭಟನೆ ನಡೆಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಲಿದೆ ಎಂದು ಮಂಜುನಾಥ ಗಿಳಿಯಾರು ಎಚ್ಚರಿಕೆ ನೀಡಿದ್ದಾರೆ.
