ಬೆಂಗಳೂರು: ಕಳೆದ ವರ್ಷ ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದನ್ನು ಸಮರ್ಥಿಸಿಕೊಂಡು ಮಾತನಾಡಿದ್ದ ಹಿನ್ನೆಲೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದೂರಿನ ಮೇರೆಗೆ ದಾಖಲಾಗಿದ್ದ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಎಫ್ ಐಆರ್‌ಹಾಗೂ ವಿಚಾರಣ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಪ್ರಮೋದ್ ಮಧ್ವರಾಜ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ನ್ಯಾಯಾಲಯವು ಅರ್ಜಿದಾರರು ನೀಡಿರುವ ಹೇಳಿಕೆಯಲ್ಲಿ ಪೊಲೀಸರು ಗಲಭೆ ಸೃಷ್ಟಿಸಲು ಪ್ರಚೋದನೆ ನೀಡಿದ ಹಾಗೂ ಅಕ್ರಮ ಕೂಟ ಅಪರಾಧದ ಅಂಶಗಳಿಲ್ಲ ಎಂದು ಎಫ್‌ಐಆರ್ ರದ್ದುಪಡಿಸಿದೆ.
2025ರ ಮಾ. 18ರಂದು ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿದ್ದ ಮಹಿಳೆಯನ್ನು ಕೆಲವರು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಪ್ರಕರಣವನ್ನು ಶಾಂತಿಯುತವಾಗಿ ಬಗೆಹರಿಸಲು ಮಲ್ಪೆ ಮೀನುಗಾರರ ಸಂಘ ಸೇರಿದಂತೆ ಇನ್ನಿತರ ಪ್ರಮುಖ ಮೀನುಗಾರಿಕಾ ಸಂಘಗಳು ಮಲ್ಪೆಯ ಬಂದರಿನಲ್ಲಿ ಸಭೆ ಆಯೋಜಿಸಿದ್ದವು. ಈ ಸಭೆಯಲ್ಲಿ ಅವರು ಮಾಡಿದ ಭಾಷಣದ ಮೇಲೆ ಕೇಸು ದಾಖಲಾಗಿತ್ತು.
