ಉಡುಪಿ: ಭಾರೀ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಸಂಚಾರದಿಂದ ರಾಷ್ಟ್ರೀಯ ಹೆದ್ದಾರಿ 169ಎಯ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಆಗುವ ಸಂಭವವಿರುವ ಹಿನ್ನೆಲೆಯಲ್ಲಿ ಈ ಘಾಟಿಯ ಮೂಲಕ ಸೆ.30ರ ವರೆಗೆ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿ, ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ. ಆದೇಶಿಸಿದ್ದಾರೆ.
ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಸಂಚರಿಸುವ ಘನ ವಾಹನಗಳು ತೀರ್ಥಹಳ್ಳಿ ನಗರ ಕುಂದಾಪುರ ಹಾಗೂ ಉಡುಪಿ ಮಾರ್ಗವಾಗಿ ಸಂಚರಿಸಬೇಕು. ಚಿಕ್ಕಮಗಳೂರಿನಿಂದ ಉಡುಪಿ ಕಡೆಗೆ ಸಾಗುವ ಘನ ವಾಹನಗಳು ಬಾಳೆಹೊನ್ನೂರು ಮಾಗುಂಡಿ ಕಳಸ ಕುದುರೆಮುಖ ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಾಗಬೇಕು. ನರಸಿಂಹರಾಜಪುರದಿಂದ ಉಡುಪಿಯತ್ತ ಬರುವ ವಾಹನಗಳು ಕೊಪ್ಪ ಜಯಪುರ ಬಾಳೆಹೊಳೆ ಕಳಸ ಕುದುರೆಮುಖ ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ಡೀಸಿ ಕಚೇರಿ ಪ್ರಕಟಣೆ ತಿಳಿಸಿದೆ.
