ರೋಷನ್ ಖಾತೂನ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ, ಅಪರಾಧಿಗಳಿಗೆ ಯೋಗ್ಯ ಶಿಕ್ಷೆ ದೊರಕುವವರೆಗೆ ಕಾನೂನು ಹೋರಾಟವನ್ನು ಮುಂದುವರಿಸುವುದು ಸಮಾಜದ ಜವಾಬ್ದಾರಿ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್‌ನ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮಿನ್ ಇಸ್ಲಾಂ ತಿಳಿಸಿದ್ದಾರೆ.
ಬಿಹಾರದ ಮಧುಬನಿ ಜಿಲ್ಲೆಯ ರೋಷನ್ ಖಾತೂನ್ ಅವರು ಗ್ರಾಮ ಮುಖ್ಯಸ್ಥರಾದ ಕುಮಾರಿ ದೇವಿ ಅವರ ಬಳಿ ನ್ಯಾಯಕ್ಕಾಗಿ ಹೋದಾಗ, ಕುಮಾರಿ ದೇವಿಯ ಮಗ ಮ್ಯಾಗ್ನು ಸಿಂಗ್ ಮತ್ತು ಅವರೊಂದಿಗೆ ಇದ್ದ ಗುಂಪು ರೋಷನ್ ಖಾತೂನ್ ಅವರನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದರು.
ರಮಝಾನ್ ಉಪವಾಸದಲ್ಲಿದ್ದ ರೋಷನ್ ಖಾತೂನ್ ಅವರು ನೀರು ಕೇಳಿದಾಗ, ಅವರಿಗೆ ಮೂತ್ರ ಮಿಶ್ರಿತ ಮದ್ಯವನ್ನು ಬಲವಂತವಾಗಿ ಕುಡಿಸಲಾಯಿತು. ಬಳಿಕ ಅವರು ಗಂಭೀರವಾಗಿ ಅಸ್ವಸ್ಥಗೊಂಡು, ಐದು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ನಂತರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಸ್ಪಷ್ಟವಾದ ವಿಡಿಯೋ ಸಾಕ್ಷ್ಯಗಳಿದ್ದರೂ ಸಹ, ಪೊಲೀಸರು ಗಂಭೀರ ಆರೋಪಗಳನ್ನು ದಾಖಲಿಸಲು ವಿಫಲರಾಗುತ್ತಿದ್ದಾರೆ ಮಾತ್ರವಲ್ಲದೇ ಸಣ್ಣ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ. ಕಾನೂನಿನ ಲೋಪಗಳನ್ನು ಬಳಸಿಕೊಂಡು ಅಪರಾಧಿಗಳು ತಪ್ಪಿಸಿಕೊಳ್ಳುವುದು ನ್ಯಾಯದ ನಿರಾಕರಣೆಯಾಗಿದೆ.
ಹಾಗೂ ಇದು ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ದುರುಪಯೋಗವಾಗಿದೆ.
ಮಹಿಳೆಯರು ಮಕ್ಕಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಅಪರಾಧಗಳ ಹೆಚ್ಚಳಕ್ಕೆ ಸರ್ಕಾರವೇ ಪ್ರಮುಖ ಹೊಣೆಗಾರಿಕೆ ಹೊತ್ತುಕೊಳ್ಳಬೇಕು.
ಸರ್ಕಾರವು ಸಂತ್ರಸ್ತ ಕುಟುಂಬಕ್ಕೂ ಹಾಗೂ ಸಮಾಜಕ್ಕೂ ನ್ಯಾಯ ದೊರಕುವಂತೆ ಕ್ರಮ ಕೈಗೊಳ್ಳಬೇಕು.
ಜಾಮೀನು ಪಡೆದ ನಂತರ ಆರೋಪಿಯಾದ ಮ್ಯಾಗ್ನು ಸಿಂಗ್ ಅವರನ್ನು ಹಾರ ಹಾಕಿ ಸ್ವಾಗತಿಸುವುದು ಅತ್ಯಂತ ಕ್ರೂರ ಮನೋಭಾವವನ್ನು ತೋರಿಸುತ್ತದೆ. ಪ್ರಕರಣದ ಗಂಭೀರತೆಯನ್ನು ಆರೋಪಿಯ ಮತ್ತು ಸಂತ್ರಸ್ತರ ಧರ್ಮದ ಆಧಾರದಲ್ಲಿ ನಿರ್ಧರಿಸುವ ಪ್ರವೃತ್ತಿ ಬದಲಾಗಬೇಕು.
ಸಂವಿಧಾನದ ಮೌಲ್ಯಗಳನ್ನು ಕಾಪಾಡಿದಾಗ ಮಾತ್ರ ಸಮಾನ ನ್ಯಾಯವನ್ನು ಖಚಿತಪಡಿಸಬಹುದು ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
