ಉಡುಪಿ: ಕೊನೆಗೂ ಡಿಸಿ ಮನ್ನಾ ಭೂಮಿ ಮಂಜೂರು - ಹೋರಾಟಕ್ಕೆ ಸಂದ ಜಯ- ಮಂಜುನಾಥ ಗಿಳಿಯಾರು

 


ಉಡುಪಿ: ತಾಲೂಕಿನ ಕೊರ್ಗಿಗ್ರಮಾದ ಸರ್ವೆ ನಂ 149ರಲ್ಲಿ (ಡಿಸಿ ಮನ್ನಾ ಭೂಮಿಯಲ್ಲಿ ಸುಮಾರು 15 ಬಡ ಪರಿಶಿಷ್ಟ ಜಾತಿಯ ಕುಟುಂಬಕ್ಕೆ ತಲಾ 0.26ಎಕ್ರೆ ಭೂಮಿಯನ್ನು ಕೊಡಿಸುವಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ವಾದ ಕುಂದಾಪುರ ತಾಲೂಕು ಸಮಿತಿ ಸುಮಾರು ಎರಡು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದು ಹೋರಾಟದ ಫಲವಾಗಿ  ಮೇ.16ರಂದು ಕುಂದಾಪುರ ತಹಶಿಲ್ದಾರರು ಪಲಾನುಭವಿಗಳಿಗೆ ಉಡುಪಿಯ ಜಿಲ್ಲಾಧಿಕಾರಿ ಕಛೇರಿಯ ಎದುರುಗಡೆಯ ಬಾಬಾ ಸಾಹೇಬ್ ಡಾ. ಬಿ.ಆರ್ ಪುತ್ತಳಿ ಎದುರು ವಿತರಿಸಿದರು.



ಸಂಘಟನೆಯ ರಾಜ್ಯ ಸಂಘಟನ ಸಂಚಾಲಕ ಸುಂದರ್ ಮಾಸ್ತರ್ ಬಾಬಾ ಸಾಹೇಬರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ,  ನಮ್ಮ ಭೂಮಿ ನಮ್ಮ ಹಕ್ಕು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹೋರಾಟ ನಡೆಯುತಿದ್ದು  ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದಲ್ಲಿ 15 ಕುಟುಂಬಕ್ಕೆ ಹಕ್ಕು ಪತ್ರಕೊಡಿಸುವಲ್ಲಿ ಕುಂದಾಪುರ ತಾಲೂಕು ಸಮಿತಿ ಯಶಸ್ವಿಯಾಗಿದೆ ಎಂದರು.



ಈ ಬಗ್ಗೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕ ಮಂಜುನಾಥ ಗಿಳಿಯಾರು ,ಇದು ಎರಡು ದಶಕಗಳ ಕಾಲ ಸಂಘಟನೆ ನಡೆಸಿದ ಹೋರಾಟದ ಫಲವಾಗಿದೆ.ಕೆಲವು ಮಂದಿಗಾದರೂ ಜಿಲ್ಲಾಡಳಿತ ಡಿಸಿ ಮನ್ನಾ ಭೂಮಿ ಮಂಜೂರು ಮಾಡಿದೆ.ಇದಕ್ಕಾಗಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ.ಇನ್ನು ಎರಡನೇ ಹಂತದಲ್ಲಿ ಡಿಸಿ ಮನ್ನಾ ಭೂಮಿ ಒತ್ತುವರಿ ತೆರವು ಮಾಡಲು ಹೋರಾಟ ಮಾಡುತ್ತೇವೆ.ಮೂರನೇ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಒತ್ತುವರಿ ಆದ ಭೂಮಿಯನ್ನು ಬೇರೆ ಕಡೆ ಒದಗಿಸಬೇಕು ಎಂಬ ಬೇಡಿಕೆ ನಮ್ಮದಾಗಿದೆ ಎಂದರು. ಮುಖಂಡ ಸುಂದರ ಮಾಸ್ತರ್ ಮತ್ತಿತರ ಮುಖಂಡರು ಜಿಲ್ಲಾಧಿಕಾರಿ ಕಚೇರಿಯ ಎದುರಿನ‌ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿ ಫಲಾನುಭವಿಗಳ ಜೊತೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

ತಾಲೂಕು ಪ್ರದಾನ ಸಂಚಾಲಕ ಕೆ.ಸಿ ರಾಜು ಬೆಟ್ಟಿನಮನೆ ಮಾತನಾಡಿ ಕುಂದಾಪುರ ತಾಲೂಕಿನ ಎಲ್ಲಾ ಗ್ರಾಮಗಳಲ್ಲು ಡಿಸಿ ಮನ್ನಾ ಭೂಮಿ ಲಭ್ಯವಿದ್ದು ಕೆಲವು ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಹ ಪರಿಶಿಷ್ಟ ಜಾತಿ ಪಂಗಡದ ಕುಟುಂಬಗಳಿಗೆ ದೊರಕುತ್ತಿಲ್ಲ. ಕೊರ್ಗಿ ಗ್ರಾಮದ  ಗ್ರಾಮಲೆಕ್ಕಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಹಾಗೂ ತಹಸೀಲ್ದಾರಗ  ಇಚ್ಚಾ ಶಕ್ತಿಯ ಕಾರ್ಯ ವೈಖರಿಯ ಫಲವಾಗಿ ಮತ್ತು ಕೊರ್ಗಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳು ಹಾಗೂ ಪಂಚಾಯತನ ಅಧ್ಯಕ್ಷರು ಹಾಗೂ ಸದಸ್ಯರು ನಮ್ಮ ಸಂಘಟನೆಯ ನ್ಯಾಯ ಸಮ್ಮತವಾದ ಭೂಮಿ ಹಕ್ಕಿನ ಹೋರಾಟದ ತೀವ್ರತೆಯನ್ನು ಅರಿತು ನಮ್ಮ ಮನವಿಗೆ ಸಂಪೂರ್ಣವಾಗಿ ಸ್ಪಂದಿಸಿದ ಫಲವಾಗಿ ಅರ್ಹ ಬಡ ಭೂ ರಹಿತ 15 ಕುಟುಂಬಗಳ ಮುಖದಲ್ಲಿ ಸಂತಸದ ನಗು ಮೂಡಿಸುವಲ್ಲಿ ನಮ್ಮ ಸಂಘಟನೆಯ ಒಗ್ಗಟ್ಟಿನ ಹೋರಾಟದ ಶಕ್ತಿಯು ಇನ್ನಷ್ಟು ಹೆಚ್ಚಾಗಿದೆ ಎಂದರು.

ಜಿಲ್ಲಾ ಮಹಿಳಾ ಸಂಘಟನ ಸಂಚಾಲಕಿ ಗೀತಾ ಸುರೇಶ್ , ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮ್ ಸುಂದರ್ ತೆಕ್ಕಟ್ಟೆ, ಕಾಪು ತಾಲೂಕು ಸಂಚಾಲಕ ರಾಜೇಂದ್ರ ಮಾಸ್ಟರ್, ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ಕುಂದಾಪುರ ತಾಲೂಕು ಕೋಶಾಧಿಕಾರಿ ಚಂದ್ರ ಕೊರ್ಗಿ, ಸಂಘಟನಾ ಸಂಚಾಲಕರಾದ ಚಂದ್ರ ಉಳ್ಳೂರು, ಅಶೋಕ್ ಮೊಳಹಳ್ಳಿ, ತಾಲೂಕು ಮಹಿಳಾ ಸಂಘಟನ ಸಂಚಾಲಕಿ ಭವಾನಿ ನಾಯ್ಕ್, ಕೊರ್ಗಿ ಗ್ರಾಮ ಶಾಖೆ ಸಂಚಾಲಕ ಪ್ರದೀಪ್ ಕೊರ್ಗಿ, ಸಿದ್ದಾಪುರ ಗ್ರಾಮ ಶಾಖೆ ಸಂಚಾಲಕ ಶ್ರೀಧರ ಕಾಸನಕಟ್ಟೆ, ಕೃಷ್ಣ ಕೊರ್ಗಿ, ಕೀರ್ತಿ ಪಡುಬಿದ್ರಿ, ಕುಮಾರ್ ಕೋಟ, ಕೃಷ್ಣ ಗೆಂಡೆಕೆರೆ, ಗೋವಿಂದ ಹಳಗೇರಿ ಹಾಗೂ ಹಕ್ಕು ಪತ್ರ ಪಡೆದ ಫಲಾನುಭವಿಗಳು ಉಪಸ್ಥಿತರಿದ್ದರು.