ಹಿಜಾಬ್, ಜನಿವಾರ, ರುದ್ರಾಕ್ಷಿ ಧರಿಸಲು ಸರ್ಕಾರದಿಂದ ಗ್ರೀನ್ ಸಿಗ್ನಲ್ - ಶಾಲಾ-ಕಾಲೇಜು ಸಮವಸ್ತ್ರ ನಿಯಮದಲ್ಲಿ ಮಹತ್ವದ ಬದಲಾವಣೆ !



ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳ ಸಮವಸ್ತ್ರ ನಿಯಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಗ್ರಾಸವಾಗಿದ್ದ, 2022ರ ಫೆಬ್ರವರಿ 05ರಂದು ಹೊರಡಿಸಲಾಗಿದ್ದ ಸಮವಸ್ತ್ರ ಕುರಿತಾದ ಆದೇಶವನ್ನು ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ. ಇದರ ಬೆನ್ನಲ್ಲೇ, ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರದ ಜೊತೆಗೆ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಧರಿಸಲು ಅಧಿಕೃತವಾಗಿ ಅನುಮತಿ ನೀಡಿ ಹೊಸ ನಿರ್ದೇಶನಗಳನ್ನು ಹೊರಡಿಸಿದೆ.

2026ರ ಮೇ 13ರಂದು ಹೊರಡಿಸಲಾಗಿರುವ ಹೊಸ ಆದೇಶದ ಪ್ರಕಾರ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು ತಮ್ಮ ನಿಯಮಾನುಸಾರ ಸಮವಸ್ತ್ರವನ್ನು ನಿಗದಿಪಡಿಸಿ ಕಡ್ಡಾಯಗೊಳಿಸುವುದನ್ನು ಮುಂದುವರಿಸಲಿವೆ. ಆದರೆ, ಈ ಸಮವಸ್ತ್ರದ ಜೊತೆಗೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ, ಜನಿವಾರ, ಶಿವದಾರ, ರುದ್ರಾಕ್ಷಿ ಹಾಗೂ ತಲೆವಸ್ತ್ರ ಅಥವಾ ಹಿಜಾಬ್ ಧರಿಸಲು ಸರ್ಕಾರ ಮುಕ್ತ ಅವಕಾಶ ಕಲ್ಪಿಸಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಅಳವಡಿಸಿಕೊಂಡಿರುವ ವಸ್ತ್ರ ಸಂಹಿತೆಯ ನಿಯಮಗಳನ್ನು ಸಹ ಪರಿಶೀಲಿಸಿ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ.ಸಮವಸ್ತ್ರದೊಂದಿಗೆ ಇಂತಹ ನಂಬಿಕೆ ಆಧಾರಿತ ಸಂಕೇತಗಳನ್ನು ಧರಿಸಿರುವ ಏಕೈಕ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ, ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಎಚ್ಚರಿಸಿದೆ. ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಬೆಳೆಸಲು ಇರುವ ಪ್ರಮುಖ ಸಾಧನವಾಗಿದೆ. ಆದ್ದರಿಂದ, ಸೀಮಿತ ನಂಬಿಕೆ ಆಧಾರಿತ ಆಚರಣೆಗಳಿಂದಾಗಿ ಯಾರಿಗೂ ಶಿಕ್ಷಣದ ಹಕ್ಕು ನಿರಾಕರಣೆ ಆಗದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದು ಸರ್ಕಾರ ಪ್ರತಿಪಾದಿಸಿದೆ.