ಪಳ್ಳಿ: ಸಮಾನ ಮನಸ್ಕರ ತಂಡದ 37ನೇ ನೂತನ ಗೃಹ "ಶ್ರೀನಿಕೇತನ" ಹಸ್ತಾಂತರ



ಕಾರ್ಕಳ : ತಾಲೂಕಿನ ಪಳ್ಳಿಯ ಸಮಾನ ಮನಸ್ಕರ ತಂಡವು ತನ್ನ ಸಾಮಾಜಿಕ ಸೇವೆಯ ಭಾಗವಾಗಿ  37ನೇ ಗೃಹ ನಿರ್ಮಾಣ ಮಾಡಿದೆ. ಈ ಯೋಜನೆಯಿಂದ ಪಳ್ಳಿ ಕನ್ನಡಿಬೈಲು ಶ್ರೀಮತಿ ಸುಮಿತ್ರ ದಿನೇಶ ಆಚಾರ್ಯ ಎರ್ಮಾಲು ಮತ್ತು ಮಗ ಮಾ. ನಿತೀಶ್ ಅವರಿಗಾಗಿ ನಿರ್ಮಿಸಿದ ಮನೆ "ಶ್ರೀನಿಕೇತನ" ಸ್ಥಳೀಯ ದಾನಿಗಳೊಂದಿಗೆ ತಂಡದ ಸದಸ್ಯರ ಎಲ್ಲಾ ರೀತಿಯ ಸಹಾಯ, ಸಹಕಾರ ಮತ್ತು ಪ್ರೋತ್ಸಾಹದಿಂದ ಶಶಿಧರ ಪುರೋಹಿತರ ಮುಖಂಡತ್ವ, ಪುತ್ತೂರು ಶಿಲ್ಪಿ  ಮಾಧವ ಆಚಾರ್ಯರ ಮಾರ್ಗದರ್ಶನ, ಶ್ರೀಮತಿ ಜಯಂತಿ ಆಚಾರ್ಯ ಪಳ್ಳಿ, ಶ್ರೀಮತಿ ವೀಣಾ ಆಚಾರ್ಯ ಪಳ್ಳಿ, ಶ್ರೀ ಜಗದೀಶ್ ಆಚಾರ್ಯ, ಪಳ್ಳಿ, ಶ್ರೀ ವೈ. ಎ. ಬಾಳ್ಳಟ್ಟ ಮೊದಲಾದವರ ನಿರ್ವಹಣೆಯಲ್ಲಿ ಪೂರ್ಣಗೊಂಡಿದೆ.ಪೂರ್ಣಗೊಂಡ ಮನೆಯನ್ನು ಸರಳ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.



ಸುಮಿತ್ರ ಅವರ ಪತಿ ದಿನೇಶ್ ಆಚಾರ್ಯ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಇವರಿಗೆ ಓರ್ವ ಮಗ ಇದ್ದಾನೆ. ಪತಿಯ ಅಗಲಿಕೆಯಿಂದ ಸುಮಿತ್ರ ಹಾಗೂ ಮಗ ಕಂಗಾಲಾಗಿದ್ದರು. ಸುಮಿತ್ರಾಳಿಗೆ ಆಕೆಯ ತಂದೆ ಶ್ರೀಧರ ಆಚಾರ್ಯ ಪಳ್ಳಿಯಲ್ಲಿ ಸಣ್ಣ ಜಾಗವನ್ನು ನೀಡಿದ್ದರು. ಆದರೆ ವಾಸಕ್ಕೆ ಮನೆ ಇರಲಿಲ್ಲ. ಇದನ್ನು ಮನಗಂಡ ಸಮಾನಮನಸ್ಕರ ತಂಡ ಮಾನವೀಯತೆ ನೆಲೆಯಲ್ಲಿ ದಾನಿಗಳ ಸಹಕಾರದಿಂದ ಸುಂದರ ಸೂರು ಕಟ್ಟಿಕೊಡುವ ಮೂಲಕ‌ ಸುಮಿತ್ರ ಬದುಕಲ್ಲಿ ಬೆಳಕು ಮೂಡಿಸಿದೆ.

“ಮನುಷ್ಯತ್ವವೇ ದೇವರು” ಎಂಬ ಧೈಯ ವಾಕ್ಯದೊಂದಿಗೆ ಸಮಾನ ಮನಸ್ಕರೆಂಬ ಸಮಾಜದ ಹೃದಯ ಶ್ರೀಮಂತರು ಸೇರಿ ದೇವರು ಕೊಟ್ಟ ಅವಕಾಶಗಳನ್ನು ಸಮಾಜದ ಒಳಿತಿಗಾಗಿ ಸಂಘಟನೆಯಿಂದ ಒಳ್ಳೆಯ ಕೆಲಸ ಮಾಡಿದ್ದಾರೆ.ಈ ಮಾನವೀಯ ಕಾರ್ಯ ಹೀಗೇ ಮುಂದುವರೆಯಲಿ  ಎಂದು 

ಕಾಂಗ್ರೆಸ್ ಮುಖಂಡರಾದ ಮುನಿಯಾಲು  ಉದಯ ಕುಮಾರ್ ಶೆಟ್ಟಿ ಶುಭ ಹಾರೈಸಿದರು.ಗಣ್ಯರು ಮತ್ತು ಸ್ಥಳೀಯ ಮುಖಂಡರ ಉಪಸ್ಥಿತಿಯಲ್ಲಿ ಗೃಹ ನಿರ್ಮಾಣಕ್ಕೆ ಕೈಜೋಡಿಸಿದ ಎಲ್ಲಾ ಆದರನೀಯ ಸಮಾನ ಮನಸ್ಕರು ಒಟ್ಟಾಗಿ ಸುಮಿತ್ರಾ ದಿನೇಶ್ ಆಚಾರ್ಯ ಅವರಿಗೆ ಮನೆಯನ್ನು ಹಸ್ತಾಂತರಿಸಿದರು. 

ಈ ಸಂದರ್ಭದಲ್ಲಿ ಶಶಿಧರ್ ಪುರೋಹಿತ್ ಕಟಪಾಡಿ, ಯೋಗೀಶ್ವರ್ ಆಚಾರ್ಯ ಅತ್ರಾಡಿ, ನಿವೃತ್ತ ಅಧ್ಯಾಪಕರಾದ ಶೀನಿವಾಸ ರಾವ್, ಬಾಲಾಜಿ ಜುವೆಲ್ಲರ್ಸ್ ಮಾಲಕರಾದ ಯಶವಂತ್ ಆಚಾರ್ಯ, ವಿಶ್ವನಾಥ ಭಂಡಾರಿ ಪಳ್ಳಿ, ವಿಲ್ಸನ್ ಲೋಬೊ ಪಳ್ಳಿ, ವಿಜಯ ಎಂ. ಶೆಟ್ಟಿ, ಪ್ರಶಾಂತ್ ಶೆಟ್ಟಿ, ಜಯಂತಿ ಗಣೇಶ್ ಆಚಾರ್ಯ, ವೀಣಾ ಆಚಾರ್ಯ, ಅನುಷಾ ಆಚಾರ್ ಪಳ್ಳಿ ಉಪಸ್ಥಿತರಿದ್ದರು.