ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮುಂದುವರಿದಿದ್ದು, ಅದರ ಅಡ್ಡಪರಿಣಾಮ ಕಳೆದ ಒಂದು ತಿಂಗಳಿಂದ ಪ್ರಪಂಚದ ಇತರೆ ದೇಶಗಳ ಮೇಲೆ ಉಂಟಾಗಿದೆ. ಈಗಾಗಲೇ ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಕೆಲವೆಡೆ ಹೋಟೆಲ್ಗಳು ಬಾಗಿಲು ಬಂದ್ ಆಗಿವೆ. ಈ ಮಧ್ಯೆ ಹೋಟೆಲ್ ಮಾಲೀಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಇಂಧನ ಕಂಪನಿಗಳು ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು 195.50 ಏರಿಸಿವೆ.
ಆಯಾ ರಾಜ್ಯಗಳಲ್ಲಿನ ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ 195.50 ರೂಪಾಯಿ ಏರಿಸಿದ್ದರ ಪರಿಣಾಮ ದೆಹಲಿಯಲ್ಲಿ ಸಿಲಿಂಡರ್ ದರ ₹2,078.50. ಗೆ ತಲುಪಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಈ ದರವನ್ನು ಇನ್ನೂ ಹೆಚ್ಚು ಅಂದ್ರೆ 218 ರೂಪಾಯಿ ಏರಿಸಲಾಗಿದೆ.
ಕಳೆದ ತಿಂಗಳಲ್ಲಿ 114. 50 ಏರಿಸಿದ್ದ ಕಂಪನಿಗಳು: ಕಳೆದ ಮಾರ್ಚ್ 1 ರಂದು 114. 50 ಏರಿಸಿದ್ದ ಕಂಪನಿಗಳು ಎಪ್ರಿಲ್ ತಿಂಗಳ ಮೊದಲ ದಿನವೇ ಬರೋಬ್ಬರಿ ₹195.50 ಹೆಚ್ಚಿಸುವ ಮೂಲಕ ಒಂದೇ ತಿಂಗಳಲ್ಲಿ ಒಟ್ಟು 310 ರೂಪಾಯಿಗೆ ಏರಿಸಿವೆ.
ಇರಾನ್ನ ಸ್ಟ್ರೇಟ್ ಆಫ್ ಹಾರ್ಮುಜ್ನಲ್ಲಿ ಕಚ್ಚಾ ತೈಲ ಸಾಗಣೆಗೆ ತೊಂದರೆ ಆಗಿರುವುದರಿಂದ ಭಾರತದಲ್ಲೂ ಸಮಸ್ಯೆ ತಲೆದೋರಿದೆ.
ಗೃಹ ಬಳಕೆ ಸಿಲಿಂಡರ್ ಬೆಲೆ ಯಥಾಸ್ಥಿತಿ: ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದ್ದರೆ, ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಜನರಿಗೆ ನೆಮ್ಮದಿ ತರಿಸಿದೆ. ಕಳೆದ ಮಾರ್ಚ್ 7 ರಂದು 14.4 ಕೆಜಿಯ ಗೃಹ ಬಳಕೆಯ ಸಿಲಿಂಡರ್ 60 ಹೆಚ್ಚಳ ಮಾಡಿದ ಬಳಿಕ ಒಟ್ಟು ದರ 913 ರೂಪಾಯಿಗೆ ತಲುಪಿತ್ತು. ಇಂದು ಈ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದ ಹಿನ್ನೆಲೆ ಯಥಾಸ್ಥಿತಿ ಮುಂದುವರಿದಿದೆ.
