ಕದನವಿರಾಮ 10 ದಿನ ವಿಸ್ತರಣೆ- ಟ್ರಂಪ್ !



ಇರಾನ್ ಮೇಲಿನ ದಾಳಿಯನ್ನು ಮುಂದಿನ 10 ದಿನಗಳ ಕಾಲ ನಿಲ್ಲಿಸುವುದಾಗಿ ಹೇಳಿರುವ ಟ್ರಂಪ್  ಕದನವಿರಾಮವನ್ನು ಮತ್ತೆ 10 ದಿನಗಳ ಕಾಲ ವಿಸ್ತರಣೆ ಮಾಡಿದ್ದಾರೆ.ಕಳೆದ ಸೋಮವಾರ 5 ದಿನ ಕದನ ವಿರಾಮ ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಂದಹಾಗೆ, ಟ್ರಂಪ್‌ ಅವರು ಕದನ ವಿರಾಮ ಘೋಷಣೆ ಸಲುವಾಗಿ ಬುಧವಾರವಷ್ಟೇ 15 ಅಂಶಗಳ ಪ್ರಸ್ತಾವವನ್ನು ಇರಾನ್‌ ಮುಂದಿರಿಸಿದ್ದರು. ಅದನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಇರಾನ್‌, ಮಾತುಕತೆ ನಡೆಸುವ ಯಾವುದೇ ಆಲೋಚನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಅಮೆರಿಕ ಜೊತೆ ಮಾತುಕತೆ ನಡೆಸುವ ಯಾವುದೇ ಉದ್ದೇಶ ಇರಾನ್‌ಗೆ ಇಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಹೇಳಿದ್ದರು.ಇರಾನ್‌ ವಿರುದ್ಧದ ಯುದ್ಧದಿಂದಾಗಿ ಅಮೆರಿಕ ಆಡಳಿತದಲ್ಲಿಯೂ ಭಿನ್ನಾಭಿಪ್ರಾಯ ಮೂಡಿದೆ.

ಇಸ್ರೇಲ್‌ ಹಾಗೂ ಅಮೆರಿಕ ಪಡೆಗಳು, ಇರಾನ್‌ ವಿರುದ್ಧ ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದವು. ದಾಳಿ ವೇಳೆ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ನಾಯಕರು ಹತ್ಯೆಯಾಗಿದ್ದರು.

ಅದರ ಬೆನ್ನಲ್ಲೇ ಇರಾನ್‌ ಪ್ರತಿದಾಳಿ ಆರಂಭಿಸಿದೆ. ಯುಎಇ, ಬಹರೇನ್‌, ಕುವೈತ್‌, ಕತಾರ್‌, ಸೌದಿ ಅರೇಬಿಯಾ ಸೇರಿದಂತೆ ಅಮೆರಿಕ ಹಾಗೂ ಇಸ್ರೇಲ್‌ ಮಿತ್ರರಾಷ್ಟ್ರಗಳತ್ತ ದಾಳಿ ನಡೆಸುತ್ತಿದೆ. ಅಷ್ಟೇ ಅಲ್ಲ. ಜಾಗತಿಕ ಮಾರುಕಟ್ಟೆಯ ರಹದಾರಿಯಾಗಿರುವ ಹೊರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರದ ಮೇಲೆ ನಿಯಂತ್ರಣ ಸಾಧಿಸಿದೆ. ಹೀಗಾಗಿ, ಸಂಘರ್ಷ ಆರಂಭವಾಗಿ ಒಂದು ತಿಂಗಳು ಕಳೆಯುತ್ತಿದ್ದರೂ, ಉದ್ವಿಗ್ನತೆ ಶಮನಗೊಳ್ಳುವ ಸೂಚನೆ ಇಲ್ಲ.

ಏತನ್ಮಧ್ಯೆ, ಇರಾನ್‌ ಪ್ರತಿದಾಳಿ ನಡೆಸಿದ ತೀವ್ರತೆಯ ಬಗ್ಗೆ ಟ್ರಂಪ್‌ ಅಚ್ಚರಿ ವ್ಯಕ್ತಪಡಿಸಿದ್ದರು. 'ಇರಾನ್‌ ಈ ರೀತಿ ಪ್ರತಿಕ್ರಿಯಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾವು ದಿಗ್ಭ್ರಮೆಗೊಂಡಿದ್ದೇವೆ' ಎಂದು ಒಪ್ಪಿಕೊಂಡಿದ್ದರು.