ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ವಿಧಿಸಿರುವ ನಿರ್ಬಂಧಗಳ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಮಹತ್ವದ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದಾರೆ. ದೂರವಾಣಿ ಕರೆಯ ಸಮಯದಲ್ಲಿ ಈ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆ ಮತ್ತು ಹಾರ್ಮುಜ್ ಜಲಸಂಧಿಯನ್ನು ತೈಲ ಮತ್ತು ಇಂಧನ ವ್ಯಾಪಾರಕ್ಕೆ ಮುಕ್ತವಾಗಿಸುವುದಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಪ್ರಾರಂಭವಾದ ನಂತರ ಮೋದಿ ಮತ್ತು ಟ್ರಂಪ್ ಮಾತನಾಡುತ್ತಿರುವುದು ಇದೇ ಮೊದಲು.ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಇಬ್ಬರು ನಾಯಕರ ನಡುವಿನ ಮಾತುಕತೆಯ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗಿನ ಮಾತುಕತೆಯ ಬಗ್ಗೆ ತಿಳಿಸಿದ್ದು, “ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದಾರೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ. ಭಾರತ ಶಾಂತಿಗೆ ಬೆಂಬಲವಾಗಿ ನಿಂತಿದೆ. ಭಾರತವು ಸಾಧ್ಯವಾದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಬೆಂಬಲ ನೀಡುವುದಾಗಿ ತಿಳಿಸಿದೆ. ಹಾರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಸ್ಥಳವಾಗುವುದು ಇಡೀ ಜಗತ್ತಿಗೆ ಅತ್ಯಗತ್ಯ ಎಂದು ಭಾರತವೂ ಹೇಳಿದೆ” ಎಂದು ಗೋರ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.ಅದೇ ರೀತಿ ಟ್ರಂಪ್ ಕರೆ ಮಾಡಿರುವ ಬಗ್ಗೆ ಪ್ರಧಾನಿ ಮೋದಿ ಕೂಡ ಬರೆದುಕೊಂಡಿದ್ದಾರೆ.
