ವಾಷಿಂಗ್ಟನ್: 48 ಗಂಟೆಯೊಳಗೆ ಹೊರ್ಮುಜ್ ಜಲಸಂಧಿ ನಿರ್ಬಂಧವನ್ನು ತೆರವುಗೊಳಿಸದಿದ್ದರೆ ಇರಾನ್ ನ ಇಂಧನ, ಮೂಲಸೌಕರ್ಯ ಧ್ವಂಸಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮೆತ್ತಗಾಗಿದ್ದು ಇದೀಗ ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಇರಾನ್ ನ ಇಂಧನ ಮತ್ತು ಮೂಲಸೌಕರ್ಯದ ಮೇಲಿನ ಯೋಜಿತ ಮಿಲಿಟರಿ ದಾಳಿಯನ್ನು ಐದು ದಿನಗಳ ಕಾಲ ವಿರಾಮ ಘೋಷಿಸಿರುವುದಾಗಿ ತಿಳಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಟ್ರಂಪ್, "ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ವಿರುದ್ಧದ ಯಾವುದೇ ಮಿಲಿಟರಿ ದಾಳಿಗಳನ್ನು ಐದು ದಿನಗಳ ಕಾಲ ಮುಂದೂಡುವಂತೆ ಅಮೆರಿಕದ ಸೇನಾ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
"ಕಳೆದ ಎರಡು ದಿನಗಳಲ್ಲಿ ವಾಷಿಂಗ್ಟನ್ ಮತ್ತು ಟೆಹ್ರಾನ್ ದೀರ್ಘ ಸಂಭಾಷಣೆಗಳನ್ನು" ನಡೆಸಿವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದು, ಇರಾನಿನ ಇಂಧನ ಮೂಲಸೌಕರ್ಯದ ವಿರುದ್ಧ ಯೋಜಿತ ಮಿಲಿಟರಿ ದಾಳಿಗಳಿಗೆ ತಾತ್ಕಾಲಿಕ ವಿರಾಮ ನೀಡುವುದಾಗಿ ಘೋಷಿಸಿದ್ದಾರೆ.
ಹೊರ್ಮುಜ್ ಜಲಸಂಧಿಯ ನಿರ್ಬಂಧವನ್ನು 48ಗಂಟೆಯೊಳಗೆ ತೆರವುಗೊಳಿಸದಿದ್ದರೆ ಇರಾನ್ ನ ಇಂಧನ ಮತ್ತು ಮೂಲಸೌಕರ್ಯದ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡಾ ನಮ್ಮ ಮೇಲೆ ದಾಳಿ ಮಾಡಿದ್ರೆ ಕೊಲ್ಲಿಯ ವಿದ್ಯುತ್, ನೀರು ಶುದ್ದೀಕರಣ ಘಟಕಗಳನ್ನು ನಾಶ ಮಾಡುವುದಾಗಿ ತಿರುಗೇಟು ನೀಡಿತ್ತು.

