ಉಡುಪಿ: ನಗರದಲ್ಲಿ ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ದೂರುದಾರ ಅನಿಲ್ ಅವರು ಫೇಸ್‌ಬುಕ್‌ನಲ್ಲಿ ಕಂಡ ವಿಡಿಯೋ ಜಾಹೀರಾತಿನ ಆಧಾರದ ಮೇಲೆ ಅದರಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದರು. ಈ ವೇಳೆ ಅಪರಿಚಿತರು “ಇಂಟರ್‌ನ್ಯಾಶನಲ್ ರಿಪೋರ್ಟಿಂಗ್ ಎಐ ಟ್ರೇಡಿಂಗ್”ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ವಿಶ್ವಾಸ ಮೂಡಿಸಿದ್ದರು.
ನಂತರ “manav verma” ಎಂಬ ವಾಟ್ಸ್ಆಪ್ ಗುಂಪಿಗೆ ಅವರನ್ನು ಸೇರಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದರು. ದಿನಾಂಕ 17/09/2025 ರಂದು ವಾಟ್ಸ್ಆಪ್ ಕರೆ ಹಾಗೂ ಸಂದೇಶಗಳ ಮೂಲಕ ಹೆಚ್ಚಿನ ಲಾಭದ ಭರವಸೆ ನೀಡಲಾಗಿದೆ.
ಇದರಿಂದ ಪ್ರೇರಿತರಾದ ಅನಿಲ್ ಅವರು 02/12/2025 ರಿಂದ 09/02/2026ರ ಅವಧಿಯಲ್ಲಿ ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ NEFT ಮತ್ತು RTGS ಮುಖಾಂತರ ಒಟ್ಟು ₹57,70,945.60 ಹಣ ವರ್ಗಾವಣೆ ಮಾಡಿದ್ದಾರೆ.
ಆದರೆ ಹೂಡಿಕೆ ಮಾಡಿದ ಹಣವನ್ನಾಗಲಿ, ಲಾಭಾಂಶವನ್ನಾಗಲಿ ಮರಳಿ ನೀಡದೇ ಆರೋಪಿತರು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2026ರಡಿ ಪ್ರಕರಣ ದಾಖಲಾಗಿದ್ದು, ಐಟಿ ಕಾಯ್ದೆ 66(C), 66(D) ಹಾಗೂ BNS ಕಲಂ 318(4) ಅಡಿಯಲ್ಲಿ ತನಿಖೆ ಮುಂದುವರಿದಿದೆ.