ಉಡುಪಿ: ಶಾಸಕ - ಮಾಜಿ ಶಾಸಕರ ರೆಸಾರ್ಟ್ ರಾಜಕೀಯ ! ರೆಸಾರ್ಟ್ ನ ಸಿಂಗಲ್ ಲೇಔಟ್ ನೀಡದೆ ದ್ವೇಷ ಸಾಧಿಸುತ್ತಿದ್ದಾರೆ- ರಘುಪತಿ ಭಟ್



ಉಡುಪಿ:ನನ್ನ ರೆಸಾರ್ಟ್‌ಗೆ ಸಂಬಂಧಿಸಿದ ಸಿಂಗಲ್ ಲೇಔಟ್ ನೀಡುವ ವಿಚಾರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದವರು ಕಳೆದ ಎರಡು ವರ್ಷಗಳಿಂದ ಸತಾಯಿಸುತ್ತಿದ್ದಾರೆ ಎಂದು ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ.

ಈ ಕುರಿತು ತಮ್ಮ ನಿವಾಸದಲ್ಕಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣವೇ ಸಿಂಗಲ್ ಲೇಔಟ್ ಮಂಜೂರು ಮಾಡಬೇಕು. ಇಲ್ಲವಾದರೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಹಿಂಬರಹ ನೀಡಬೇಕು. ಈ ಬೇಡಿಕೆ ಈಡೇರುವ ತನಕ ಸೋಮವಾರದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಧರಣಿ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

ನಾನು ಮೊದಲಿನಿಂದಲೂ ಉದ್ಯಮಿ.ರಾಜಕೀಯ ನನ್ನ ಪ್ರವೃತ್ತಿಯಾಗಿತ್ತು.ಉದ್ಯಮ ನನ್ನ ವೃತ್ತಿ.ಕಳೆದ 2 ವರ್ಷಗಳಿಂದ ಉಡುಪಿ ಶಾಸಕರು ರಾಜಕೀಯ ದ್ವೇಷದಿಂದ ಸಿಂಗಲ್ ಲೇಔಟ್ ನೀಡಲು ಸತಾಯಿಸುತ್ತಿದ್ದಾರೆ.ಈ ಬಗ್ಗೆ ಎಲ್ಲ ರೀತಿಯಲ್ಲೂ ಅಧಿಕಾರಿಗಳಿಗೆ ತಿಳಿಸಿದ್ದೇನೆ.ಕೋರ್ಟ್ ಗೂ ಹೋಗಿದ್ದೇನೆ.ಇದೀಗ ನ್ಯಾಯಕ್ಕಾಗಿ  ಧರಣಿ ಮೊರೆ ಹೋಗಿದ್ದೇನೆ ಎಂದರು.

ಯಶ್ಪಾಲ್ ಗೆ ಟಿಕೆಟ್ ಇಲ್ಲ !

ನಾನು 3 ಬಾರಿ ಶಾಸಕನಾಗಿದ್ದೇನೆ.ಆದರೆ ಯಶ್ಪಾಲ್ ಅವರಿಗೆ ಮುಂದಿನ ಸಲ ಟಿಕೆಟ್ ಸಿಗಲ್ಲ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ನಮಗೆ ಗೆಲ್ಲಲಾಗದಿದ್ದರೂ ಸೋಲಿಸುವ ತಾಕತ್ತು ಇದೆ. ಈ ಹಿಂದೆಲ್ಲ ಯಾವುದೇ ಪಕ್ಷದ ಶಾಸಕರಿದ್ದರೂ ವೈಯಕ್ತಿಕ ದ್ವೇಷ ಮಾಡುತ್ತಿರಲಿಲ್ಲ.ಈಗ ಅದು ಪ್ರಾರಂಭವಾಗಿದೆ.ನಾನು ಶಾಸಕನಾಗಿದ್ದಾಗ ಎಲ್ಲ ಪಕ್ಷದವರ ಕೆಲಸ ಮಾಡಿಕೊಡುತ್ತಿದ್ದೆ. ಇವರಿಗೆ ನನ್ನ ಮೇಲೆ ಯಾಕೆ ದ್ವೇಷವೋ ಗೊತ್ತಿಲ್ಲ ಎಂದರು.

ಯಶ್ಪಾಲ್ ಸುವರ್ಣ ಸ್ಪಷ್ಟೀಕರಣ:

ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮದ ಸರ್ವೇ ನಂಬರ್ 118/2ಎ1ಎ3 ಮತ್ತು 118/2ಬಿ ಯ 0.90 ಎಕರೆ ಜಾಗದ ಏಕವಿನ್ಯಾಸ ನೀಡುವ ಬಗ್ಗೆ ಸ್ಥಳೀಯ ಕರಾವಳಿ ಯುವಕ ಮಂಡಲದ ಸದಸ್ಯರು ಹಾಗೂ ಸ್ಥಳೀಯ ಮೀನುಗಾರರು ಆಕ್ಷೇಪ ಮಾಡಿ, ಅಕ್ರಮವಾಗಿ ನಕಲಿ ದಾಖಲೆಯನ್ನು  ಸೃಷ್ಟಿಸಿರುವ ಬಗ್ಗೆ ದೂರು ನೀಡಿರುತ್ತಾರೆ.

ಈ ಹಿಂದೆ ಈ ಅಕ್ರಮದಲ್ಲಿ ಭಾಗಿಯಾಗಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಈ ಹಿಂದಿನ ಕಮಿಷನರ್ ಮಹೇಶ್ಚಂದ್ರ ರವರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತಾಗಿದ್ದಾರೆ.

ಈ ಕಡತಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರಾವಳಿ ಯುವಕ ಮಂಡಲದ ಸದಸ್ಯರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು, ತನಿಖೆಯ ಹಂತದಲ್ಲಿದೆ ಹಾಗೂ ಉಚ್ಚ ನ್ಯಾಯಾಲಯದಲ್ಲೂ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಾಗಿದೆ.

ಓರ್ವ ಜವಾಬ್ದಾರಿಯುತ ಶಾಸಕನಾಗಿ ಸ್ಥಳೀಯ ಯುವಕ ಮಂಡಲ ಹಾಗೂ ಸ್ಥಳೀಯ ಮೀನುಗಾರರ ಮನವಿಯ ಮೇರೆಗೆ ಈ ಕಡತದ ಬಗ್ಗೆ ನಿಯಮಾವಳಿಗೆ ಬದ್ಧವಾಗಿ ಕ್ರಮ ಕೈಗೊಂಡು ವರದಿ ನೀಡುವಂತೆ ಸಾರ್ವಜನಿಕರ ಪರವಾಗಿ ಪತ್ರ ಬರೆದಿದ್ದೇನೆ.

ಈ ವಿಚಾರದಲ್ಲಿ ನನಗೆ ಯಾವುದೇ ಸ್ವಹಿತಾಸಕ್ತಿಯಾಗಲಿ ಅಥವಾ ದುರುದ್ದೇಶ ಇಲ್ಲ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.