ಕಾರ್ಕಳ: ತಾಲೂಕು ಮಟ್ಟದ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್)ದ ಹಿತರಕ್ಷಣಾ ಮತ್ತು ಕುಂದುಕೊರತೆ ಸಭೆಯು ಕೆಲವು ಅಧಿಕಾರಿಗಳ ಗೈರಿನಿಂದಾಗಿ ರದ್ದುಗೊಂಡ ಪ್ರಸಂಗ ನಡೆಯಿತು. ಕೆಲವು ಇಲಾಖೆಗಳ ಮುಖ್ಯಸ್ಥರು ಸಭೆಗೆ ಗೈರಾದ್ದರಿಂದ ಆಕ್ರೋಶಗೊಂಡ ಸಮುದಾಯದ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.
ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯು ತಹಶೀಲ್ದಾರ್ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಆರಂಭವಾಗುತ್ತಿದ್ದಂತೆಯೇ, ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಅನುಪಸ್ಥಿತಿ ಇರುವುದನ್ನು ಮುಖಂಡರು ಗಮನಿಸಿದರು. "ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳೇ ಇಲ್ಲದಿದ್ದರೆ ಸಭೆ ನಡೆಸಿ ಏನು ಪ್ರಯೋಜನ?" ಎಂದು ಮುಖಂಡರಾದ ಶ್ರೀನಿವಾಸ್ ಕಾರ್ಲ ಹಾಗೂ ರಮೇಶ್ ಪೆರ್ವಾಜೆ ಪ್ರಶ್ನಿಸಿದರು. ಪುರಸಭೆ ಮುಖ್ಯಾಧಿಕಾರಿಗಳು ಆಗಮಿಸುವ ಬದಲಿಗೆ ಸಿಬ್ಬಂದಿಯನ್ನು ಕಳುಹಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ ತಹಶೀಲ್ದಾರ್ ಪ್ರದೀಪ್ ಕುಮಾರ್, ಸಭೆಗೆ ಗೈರಾದ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು. "ಮುಂದಿನ ಸಭೆಗೆ ಇಲಾಖಾ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಿರಬೇಕು. ಸಿಬ್ಬಂದಿಗಳನ್ನು ಕಳುಹಿಸುವುದು ಸಹಿಸಲಾಗುವುದಿಲ್ಲ" ಎಂದು ಎಚ್ಚರಿಕೆ ನೀಡಿದರು.
