ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯಿಂದ ಇತಿಹಾಸ ಸೃಷ್ಟಿ: ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಖುದ್ದು ವಾದ


ಸುಪ್ರೀಂ ಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು  ಸುಪ್ರೀಂಕೋರ್ಟ್‌ನಲ್ಲಿ ಸ್ವತಃ ಹಾಜರಾಗಿ ವಾದ ಮಂಡಿಸುವ ಮೂಲಕ ಭಾರತೀಯ ರಾಜಕೀಯ ಮತ್ತು ನ್ಯಾಯಾಂಗ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಸುಪ್ರೀಂಕೋರ್ಟ್‌ನಲ್ಲಿ "ಪಾರ್ಟಿ-ಇನ್-ಪರ್ಸನ್" (Party-in-person) ಆಗಿ ಕಾಣಿಸಿಕೊಳ್ಳುವ ಮೂಲಕ, ಅಧಿಕಾರದಲ್ಲಿರುವಾಗಲೇ ತನ್ನ ಕೇಸನ್ನು ತಾನೇ ವಾದಿಸಿದ ಭಾರತದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಕರಣದ ಹಿನ್ನೆಲೆ: 

ಮಮತಾ ಬ್ಯಾನರ್ಜಿ ಅವರು ಕೇಂದ್ರ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ನಡೆಸುತ್ತಿರುವ "ವಿಶೇಷ ತೀವ್ರ ಪರಿಷ್ಕರಣೆ" (Special Intensive Revision - SIR) ಪ್ರಕ್ರಿಯೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಮಮತಾ ಅವರ ಪ್ರಮುಖ ವಾದಗಳು:

ಮತದಾರರ ಹಕ್ಕು: ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಬದುಕಿರುವವರನ್ನು ಸತ್ತಿದ್ದಾರೆಂದು ಘೋಷಿಸಿ ಹೆಸರನ್ನು ತೆಗೆದುಹಾಕಲಾಗುತ್ತಿದೆ" ಎಂದು ಅವರು ಗಂಭೀರವಾಗಿ ವಾದಿಸಿದರು. ಆಧಾರ್ ಕಾರ್ಡ್ ಇದ್ದರೂ ಅದನ್ನು ತಿರಸ್ಕರಿಸಿ ಹೆಚ್ಚುವರಿ ದಾಖಲೆ ಕೇಳುತ್ತಿರುವುದು ಬಡವರಿಗೆ ತೊಂದರೆಯಾಗುತ್ತಿದೆ ಎಂದು ವಾದ ಮಂಡಿಸಿದರು.ಸಾಮಾನ್ಯವಾಗಿ ಎರಡು ವರ್ಷ ಹಿಡಿಯುವ ಪ್ರಕ್ರಿಯೆಯನ್ನು ಚುನಾವಣೆಯ ಹೊಸ್ತಿಲಲ್ಲಿ ಕೇವಲ ಎರಡು ತಿಂಗಳಲ್ಲಿ ಮುಗಿಸಲು ಆಯೋಗ ಮುಂದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು."ಮದುವೆಯಾಗಿ ಗಂಡನ ಮನೆಗೆ ಹೋದ ಮಹಿಳೆಯರ ಹೆಸರನ್ನು ಏಕಪಕ್ಷೀಯವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ" ಎಂದು ಅವರು ಕೋರ್ಟ್ ಗಮನಕ್ಕೆ ತಂದರು.

ಈ ವಾದದ ವೈಶಿಷ್ಟ್ಯತೆ:

ಕಾನೂನು ಪದವೀಧರೆ: ಮಮತಾ ಬ್ಯಾನರ್ಜಿ ಅವರು ಎಲ್‌ಎಲ್‌ಬಿ (LLB) ಪದವೀಧರೆಯಾಗಿದ್ದು, ಹಳೆಯ ವಕೀಲ ವೇಷ ಧರಿಸಿ ನ್ಯಾಯಾಲಯಕ್ಕೆ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.

ರಾಜಕೀಯ ಸಂಚಲನ: ಟಿಎಂಸಿ ಪಕ್ಷವು ಈ ಘಟನೆಯನ್ನು "ಜನರ ವಕೀಲ vs ಶೈತಾನನ ವಕೀಲ" ಎಂದು ಬಣ್ಣಿಸಿ ಅಭಿಯಾನ ನಡೆಸಿದೆ.

ನ್ಯಾಯಾಲಯದ ಪ್ರತಿಕ್ರಿಯೆ: ಮುಖ್ಯ ನ್ಯಾಯಮೂರ್ತಿಗಳ ಪೀಠವು ಮಮತಾ ಅವರ ವಾದವನ್ನು ಆಲಿಸಿ, "ಯಾವುದೇ ನಿರಪರಾಧಿ ಮತದಾರ ಪಟ್ಟಿಯಿಂದ ಹೊರಗುಳಿಯಬಾರದು" ಎಂದು ಅಭಿಪ್ರಾಯಪಟ್ಟಿದೆ.