ಉಡುಪಿ: ಜನವರಿ ಕಳೆದು ಫೆಬ್ರವರಿ ತಿಂಗಳಿನ ಮಧ್ಯದಲ್ಲಿದ್ದೇವೆ. ಬಿಸಿಲು ನಿಧಾನಕ್ಕೆ ತನ್ನ ಶಾಖವನ್ನು ನೀಡಲು ಆರಂಭಿಸಿದ್ದು, ಚಳಿ ಮಾಯವಾಗುತ್ತಿದೆ. ಹವಾಮಾನ ವೈಪರೀತ್ಯದ ನಡುವೆ ಉಡುಪಿಯಲ್ಲಿ ನೀರಿಗೆ ಹಾಹಕಾರ ಆರಂಭವಾಗಿರುವುದು ಜನರನ್ನು ಕಂಗೆಡಿಸಿದೆ.
ಹೌದು, ಉಡುಪಿಯ ಅಂಬಲಪಾಡಿ ಗ್ರಾ.ಪಂ ವ್ಯಾಪ್ತಿಯ ಕಿದಿಯೂರು ಗರಡಿ ರಸ್ತೆಯ ತೋಟದ ಪರಿಸರದ ಸುಮಾರು 35 ಮನೆಗಳಿಗೆ ಜನವರಿ ತಿಂಗಳಿನಿಂದ ನೀರು ಬರುತ್ತಿಲ್ಲ. ಇದಕ್ಕೆಲ್ಲಾ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ದಿನನಿತ್ಯದ ಬಳಕೆಗೆ ಟ್ಯಾಂಕರ್ ಮೂಲಕ ನೀರು ತರಿಸುತ್ತಿದ್ದಾರೆ. ಒಂದು ಸಣ್ಣ ಟ್ಯಾಂಕರ್‌ನಲ್ಲಿ ತರಿಸುವ ನೀರಿಗೆ ₹ 600 ಭರಿಸಬೇಕಾಗಿದೆ. ಇದು 3 ರಿಂದ 4 ದಿನ ಬಳಕೆ ಮಾಡಬಹುದು. ಫೆಬ್ರವರಿಯಲ್ಲೇ ಟ್ಯಾಂಕರ್ ಮೂಲಕ ನೀರು ತರಿಸುವ ಅನಿವಾರ್ಯತೆಯನ್ನು ಇಲ್ಲಿನ ಗ್ರಾಮ ಪಂಚಾಯತ್ ಸೃಷ್ಟಿಸಿದೆ.
ವಾರಾಹಿಯಿಂದ ನಗರಕ್ಕೆ ನೀರು ಪೂರೈಕೆ ಆಗುತ್ತದೆ ಎಂದು ಹೇಳಿ, ಈ ಭಾಗದ ಮನೆ ಮನೆಗೆ ವಾರಾಹಿ ನೀರಿಗೆ ನಳ್ಳಿಯನ್ನು ಅಳವಡಿಸಲಾಗಿದೆ. ಆದರೆ ಈ ನಳ್ಳಿಯಲ್ಲಿ ನೀರೇ ಬಂದಿಲ್ಲ. ಗ್ರಾಮ ಪಂಚಾಯತ್‌ನಿಂದ ನೀರು ಬರುವ ನಳ್ಳಿಯಲ್ಲಿ ಎರಡು ದಿನಕ್ಕೊಮ್ಮೆ ಹನಿ ಹನಿ ನೀರು ಬರುತ್ತಿದೆ.
ನೀರು ಬರುತ್ತಿಲ್ಲ ಎಂದು ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ₹600 ಕೊಟ್ಟು ನೀರು ತರಿಸುತ್ತಿದ್ದೇವೆ. ದಿನಕ್ಕೆ ₹ 600 ದುಡಿಯುವ ಕೆಲಸವಿದ್ದರೇ, ಆ ದುಡ್ಡನ್ನೆಲ್ಲಾ ನೀರಿಗೆ ಕೊಟ್ಟರೇ ಬದುಕುವುದು ಬೇಡವೇ..? ಶಾಲೆಗೆ ಹೋಗುವ ಮಕ್ಕಳು, ಹಿರಿಯರು ಇದ್ದಾರೆ. ಇವರಿಗೆಲ್ಲಾ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ನೀರಿನ ಸಮಸ್ಯೆಯಿಂದ ಮುಕ್ತಿ ಸಿಗುವುದು ಯಾವಾಗ...? ಎಂದು ಸ್ಥಳೀಯರಾದ ಲೀಲಾವತಿ ಅವರ ಪ್ರಶ್ನೆ.
ಹಿಂದಿನ ವರ್ಷಗಳಲ್ಲಿ ಮೇ ತಿಂಗಳ ಅಂತ್ಯದಲ್ಲಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ ಉಂಟಾಗಿತ್ತು. ಕಳೆದ ವರ್ಷ ಉತ್ತಮ ಮಳೆಯಾಗಿದೆ. ಆದರೂ ಈ ಬಾರಿ ಜನವರಿಯಿಂದಲೇ ಟ್ಯಾಂಕರ್ ನೀರಿಗೆ ಅವಲಂಬಿಸುವಂತೆ ಮಾಡಿರುವುದು ಗ್ರಾಮ ಪಂಚಾಯತ್ ಆಡಳಿತ. ದುಡಿದ ಹಣವನ್ನೇ ಟ್ಯಾಂಕರ್ ನೀರಿಗೆ ವ್ಯಯಿಸಬೇಕು. ಗ್ರಾಮ ಆಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಸ್ಥಳೀಯರಾದ ಪ್ರಸಾದ್ ಹೇಳುತ್ತಾರೆ.
ಕಿದಿಯೂರು ಗರಡಿ ರಸ್ತೆಯ ತೋಟದ ಸಮೀಪದ 35ಕ್ಕೂ ಹೆಚ್ಚು ಮನೆಗಳಿಗೆ ನೀರು ಸರಬರಾಜು ಆಗುತ್ತಿಲ್ಲ ಎಂಬ ಮಾಹಿತಿ ಇದೆ. ಹಿರಿಯ ನಾಗರಿಕರು ಈ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಶೀಘ್ರದಲ್ಲೇ ಕ್ರಮಕೈಗೊಳ್ಳುತ್ತೇನೆ ಎಂದು ಪಂಚಾಯತ್ ಪಿಡಿಓ. ಶಿವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

