ಉಡುಪಿ: ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ನಡೆದ ಪ್ರವಾಸಿ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ದಿ ವೇವ್ ರೈಡರ್ ಬೋಟ್ ನ ಚಾಲಕ ಸೂಫಿಯಾನ, ವಾಸುಮೆಂಡನ್, ಸುಹಾಸ್ ಶ್ರೀಯಾನ್ ಬಂಧಿತರು. ಜನವರಿ 26ರಂದು ಕೋಡಿಬೆಂಗರೆ ಸಮೀಪ ಪ್ರವಾಸಿ ಬೋಟ್ ದುರಂತದಲ್ಲಿ ಮೂವರು ಪ್ರವಾಸಿಗರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಬೋಟಿನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸದೆ ಬೋಟ್ ಚಲಾಯಿಸಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಬಂದಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
