ಉಡುಪಿ: ವಿದ್ಯಾರ್ಥಿ, ಯುವಜನತೆ ನಾನಾ ವ್ಯಸನ ಸಹಿತ ತಪ್ಪು ದಾರಿಯಲ್ಲಿ ಸಾಗದಂತೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಜತೆಗೆ ಸಮಾಜಕ್ಕೆ ಕೊಡುಗೆ ನೀಡಲು ಪ್ರೇರಣೆ ಸಿಗಬೇಕು ಎಂದು ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಪ್ರಾಧಿಕಾರದ ಸದಸ್ಯ ಹಾಗೂ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.
ಅವರು ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ (ಮುಂಬೈ), ದೊಡ್ಡಣಗುಡ್ಡೆ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ವತಿಯಿಂದ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಸಹಯೋಗದಲ್ಲಿ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಸಭಾಂಗಣದಲ್ಲಿ ೧೦ದಿನಗಳ ಕಾಲ ನಡೆಯುವ ೩೫ನೇ ಮದ್ಯ ವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವಂತ ನಾಗರಿಕ ಸಮಾಜ ರೂಪಿಸುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ವ್ಯಸನ, ಸಣ್ಣ ತುಪ್ಪಿಗಾಗಿ ಬೀದಿಗೆ ಬಿದ್ದ ಅದರಲ್ಲೂ ಅಸಹಾಯಕ ಮಹಿಳೆಯರ ರಕ್ಷಣೆಗೆ ಉಡುಪಿ ಜಿಲ್ಲೆಯಲ್ಲಿ ಬಾಳಿಗಾ ಆಸ್ಪತ್ರೆ ಹೊರತು ಯಾವುದೇ ಸೌಲಭ್ಯವಿಲ್ಲ ಎಂದು ವಿಷಾದಿಸಿದರು. ಇನ್ನಾದರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಣು ತೆರೆಯಲು ಎಂದು ಆಗ್ರಹಿಸಿದರು.
ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಿ, ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ. ಪ್ರಕಾಶ್ ಸಿ.ತೋಳಾರ್, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾ. ಅಶೋಕ್ ಕುಮಾರ್, ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಲತಾ ನಾಯಕ್, ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ. ಮಾನಸ ಈ.ಆರ್. ಉಪಸ್ಥಿತರಿದ್ದರು.
ಪದ್ಮಾ ರಾಘವೇಂದ್ರ ಪ್ರಾರ್ಥಿಸಿದರು. ಆಸ್ಪತ್ರೆ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದೀಪಶ್ರೀ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಮೂರ್ತಿ ವಂದಿಸಿದರು.



