ಹೆಜಮಾಡಿ: ಟಯರ್ ಸ್ಪೋಟ- ಟೆಂಪೋ ಮಗುಚಿ ಮಹಿಳಾ ಕಾರ್ಮಿಕೆ ಸಾವು


ಘಟನಾ ಸ್ಥಳ

ಪಡುಬಿದ್ರಿ: ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋವೊಂದರ ಟಯರ್ ಸ್ಫೋಟಗೊಂಡು ಮಗುಚಿ ಬಿದ್ದು ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ರಾ.ಹೆ.೬೬ರಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.

ಮೃತಪಟ್ಟ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ, ಮಹಂತೇಶ್ ಸಹಿತ 7 ಜನರು ಗಾಯಗೊಂಡಿದ್ದಾರೆ. ಮುಲ್ಕಿಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟೆಂಪೋದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮತ್ತು ಪರಿಕರಗಳ ಸಹಿತ ಪುರುಷರು ಮತ್ತು ಮಹಿಳೆಯರಿದ್ದರು. ವೇಗವಾಗಿ ಸಾಗುತ್ತಿದ್ದ ವಾಹನದ ಟಯರ್ ಏಕಾಏಕಿ  ಸ್ಫೋಟಗೊಂಡು ಚಾಲಕನ ನಿಯಂತ್ರಣ ಕಳೆದು ಕೊಂಡ ಪರಿಣಾಮ ಮುಗುಚಿ ಬಿದ್ದಿದೆ. 

ಮುಗುಚಿಬಿದ್ದ ಟೆಂಪೋದ ಅಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದು, ಅವರನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆಯಲಾಗಿದೆ. ಮಹಿಳೆಯೋರ್ವರು ಯಂತ್ರದ ಅಡಿಗೆ ಸಿಲುಕಿ ಅವರನ್ನು ಹೊರತೆಗೆಯಲು ಸಾರ್ವಜನಿಕರು ಮತ್ತು ಟೋಲ್ ಸಿಬ್ಬಂದಿ ಹರಸಾಹಸಪಟ್ಟರು.

ಹೆಜಮಾಡಿ ಟೋಲ್ ಅಂಬುಲೆನ್ಸ್ ಮತ್ತು ಕ್ರೇನ್ ತಕ್ಷಣ ಆಗಮಿಸಿ ಮಹಿಳೆಯನ್ನು ರಕ್ಷಿಸಲಾಯಿತು. ತೀವ್ರ ಗಾಯಗೊಂಡಿದ್ದ ಅವರನ್ನು ಟೋಲ್ ಅಂಬುಲೆನ್ಸ್ ಮೂಲಕ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.  ಪಡುಬಿದ್ರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.