![]() |
| ಸಾಂದರ್ಭಿಕ ಚಿತ್ರ |
ಉಡುಪಿ: ಹೊರ ಜಿಲ್ಲೆಯ ಬಾಲಕಿ ತನ್ನ ಕುಡುಕ ತಂದೆಯ ನಿರಂತರ ಹಲ್ಲೆಗೆ ಹೆದರಿ ಉಡುಪಿಗೆ ಬಂದಿದ್ದು, ವಿಷಯ ತಿಳಿದ ವಿಶು ಶೆಟ್ಟಿ ಅಂಬಲಪಾಡಿ, ಬಾಲಕಿಗೆ ಧೈರ್ಯ ತುಂಬಿ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ದಾಖಲಿಸಿದ ಘಟನೆ ನಡೆದಿದೆ.
ಬಾಲಕಿಯ ತಾಯಿ ವರುಷದ ಹಿಂದೆ ಪತಿಯ ದೌರ್ಜನ್ಯಕ್ಕೆ ಬೇಸತ್ತು ಊರು ಬಿಟ್ಟು ಉಡುಪಿಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಪತಿ ಕುಡಿದು ಹೆಂಡತಿಯ ಮೇಲಿನ ಸಿಟ್ಟಿಗೆ ಮಗಳಿಗೆ ದೌರ್ಜನ್ಯ ಹಿಂಸೆ ನೀಡುತ್ತಿದ್ದು, ಬಾಲಕಿ ಹೆದರಿ ತಾಯಿಯ ಬಳಿ ಬಂದಿದ್ದಳು. ಅಪ್ರಾಪ್ತ ಬಾಲಕಿ ಆದುದರಿಂದ ತಾಯಿ ಕೆಲಸ ಮಾಡುವ ಸ್ಥಳದಲ್ಲಿ ಮಗಳಿಗೆ ಅನುಮತಿ ನೀಡಲಿಲ್ಲ. ಈ ಬಗ್ಗೆ ತನ್ನ ಅಸಹಾಯಕತೆಯನ್ನು ವಿಶು ಶೆಟ್ಟಿಯವರಿಗೆ ತಿಳಿಸಿದ್ದು, ವಿಶು ಶೆಟ್ಟಿ ನೆರವು ನೀಡಿ ಕಾನೂನು ರೀತಿಯ ಸಲಹೆ ನೀಡಿ ಇಲಾಖೆಯ ಸುಪರ್ದಿಗೆ ಒಪ್ಪಿಸಿ ನೆರವು ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಇದ್ದು ತೊಂದರೆಗೊಳಗಾದ ಮಕ್ಕಳ ಬಗ್ಗೆ ಶಾಲಾ ಶಿಕ್ಷಕರು ಸಮಿತಿಗೆ ಮಾಹಿತಿ ನೀಡಿದರೆ ಸಮಸ್ಯೆ ಪರಿಹಾರವಾಗುತ್ತದೆ. ಹೆಣ್ಣು ಮಕ್ಕಳು ಊರು ಬಿಟ್ಟು ಹೋಗಿ ದುರಂತ ಆಗುವ ಸಂಭವ ಹೆಚ್ಚು .ಇದಕ್ಕೆ ಅವಕಾಶ ನೀಡಬಾರದು. ಯಾವುದೇ ಜಿಲ್ಲೆಯಲ್ಲಿ ರಕ್ಷಣೆ ಮಾಡಿದರೂ ಇಲಾಖೆ ತದನಂತರ ಬಾಲಕಿಯ ಸ್ವಂತ ಊರಿನ ಜಿಲ್ಲೆಯ ಮಕ್ಕಳ ಸಮಿತಿಗೆ ವರ್ಗಾಯಿಸುವ ಕ್ರಮ ಈಗ ಸರಕಾರ ತೆಗೆದುಕೊಂಡಿದೆ. ಈ ಬಗ್ಗೆ ಪ್ರತಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ವಿಶು ಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.
