ಬ್ರಹ್ಮಾವರ: ಗಣಿಗಾರಿಕೆ ವಿಷಯದಲ್ಲಿ ಕೊರಗರ ಮೇಲೆ ದೌರ್ಜನ್ಯ ಆರೋಪ; ಬ್ರಹ್ಮಾವರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ



ಬ್ರಹ್ಮಾವರ: ಕೊರಗ ಕುಟುಂಬಗಳು ಹಲವು ದಶಕದಿಂದ  ನಡೆಸಿಕೊಂಡು ಬಂದ ಸಾಂಪ್ರದಾಯಿಕ  ಕಲ್ಲುಗಣಿಗಾರಿಕೆಯನ್ನು ಅನ್ಯರು‌ ಕಬಳಿಸಲು ಪ್ರಯತ್ನಿಸುತ್ತಿದ್ದು ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ,‌ ಗರಿಕೆಮಠ, ಅಚ್ಲಾಡಿಯ ಕೊರಗ ಕುಟುಂಬಗಳು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಸಹಕಾರದಲ್ಲಿ ಬ್ರಹ್ಮಾವರ ತಹಶಿಲ್ದಾರ್ ಕಚೇರಿ ಎದುರು  ಪ್ರತಿಭಟನೆ ನಡೆಸಿದವು.

ಈ‌ ಸಂದರ್ಭ ಕೊರಗ ಅಭಿವೃದ್ಧಿ ಸಂಘಗಳ  ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಮಾತನಾಡಿ, ಕೊರಗ ಸಮಾಜದ ಮೇಲೆ ಬಲಾಢ್ಯರು, ರಾಜಕೀಯ ಪ್ರಾಬಲ್ಯರಿಂದ‌ ನಿರಂತರ ದಾಳಿ, ದೌರ್ಜನ್ಯ ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗ ಎನ್ನುವಂತೆ ಇದೀಗ ಸಾಂಪ್ರದಾಯಿಕ ಕಲ್ಲುಗಣಿಗಾರಿಕೆ ಕಾರ್ಮಿಕರನ್ನು ಒಕ್ಕಲೆಬ್ಬಿಸುವ‌ ಹುನ್ನಾರ ಗರಿಕೆಮಠದಲ್ಲಿ ನಡೆಯುತ್ತಿದೆ. ಪ್ರಭಾವಗಳಿಗೆ ಮಣಿದು ಕೊರಗ ಕುಟುಂಬ ಹೊರತುಪಡಿಸಿ ಇತರರಿಗೆ ಪರವಾನಿಗೆ ನೀಡಿದಲ್ಲಿ ಅಮರಣಾಂತ ಉಪವಾಸ ನಡೆಸಲಾಗುವುದು ಎಂದರು.

ಪ್ರತಿಭಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಸುದರ್ಶನ್ ಭೇಟಿ ನೀಡಿ ಮಾತುಕತೆ ನಢಸಿದರು.ಪ್ರತಿಭಟನಾ ಸ್ಥಳಕ್ಕೆ ಉಡುಪಿ ಇಲಾಖೆಯ ಅಧಿಕಾರಿ ಹಾಜೀರ ಭೇಟಿ ನೀಡಿ ಮಾತುಕತೆ ನಡೆಸಿದರು. ನೀವು ನೀಡಿರುವ ಆಕ್ಷೇಪಣೆ ಕುರಿತು ಈಗಾಗಲೇ ತಹಶೀಲ್ದಾರರ ಮೂಲಕ ವರದಿ ಪಡೆದಿದ್ದು ನಿಮ್ಮ ಹೇಳಿಕೆ ದಾಖಲಿಸಲಾಗಿದೆ ಹಾಗೂ ವಸ್ತುಸ್ಥಿತಿ ಬಗ್ಗೆ ಕೂಡ ಉಲ್ಲೇಖ ಮಾಡಲಾಗಿದೆ. ಮುಂದೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.ಜತೆಗೆ ಮೂಲ ನಿವಾಸಿಗಳಾದರೂ ಕೂಡ ಅರ್ಜಿ ಹಾಕಿ,‌ಪರವಾನಿಗೆ ಪಡೆದೇ ಗಣಿಗಾರಿಕೆ ನಡೆಸಬೇಕು.‌ಹೀಗಾಗಿ ಕೊರಗ ಕುಟುಂಬಗಳು ಕೂಡ ಅರ್ಜಿ ಸಲ್ಲಿಸಲಿ ಎಂದರು. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.