ಉಡುಪಿ: ಆಸ್ಪತ್ರೆಗಳಲ್ಲಿ ಇ.ಎಸ್.ಐ. ಸೌಲಭ್ಯ ಪದೇ ಪದೇ ವ್ಯತ್ಯಯ- ಶಾಸಕ ಯಶ್ ಪಾಲ್ ಆಕ್ರೋಶ




ಉಡುಪಿ: ಕಳೆದ ಹಲವು ತಿಂಗಳುಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ಇ.ಎಸ್.ಐ. ಸೌಲಭ್ಯ ಹಲವಾರು ಬಾರಿ ವ್ಯತ್ಯಯವಾಗಿ ಇ.ಎಸ್.ಐ. ನೋಂದಾಯಿತ ನೌಕರರು ಮತ್ತು ಅವಲಂಬಿತ ಕುಟುಂಬಗಳು ತೊಂದರೆಗೀಡಾಗಿವೆ. ಖಾಸಗಿ ಆಸ್ಪತ್ರೆಗಳೊಂದಿಗಿನ ರಾಜ್ಯ ಸರಕಾರದ ಒಡಂಬಡಿಕೆಯು ನವೀಕರಣಗೊಳ್ಳದೆ ಸದ್ರಿ ಸಮಸ್ಯೆ ರಾಜ್ಯಾದ್ಯಂತ ಉದ್ಭವಿಸಿರುವುದಾಗಿ ಮಾಹಿತಿ ನೀಡಲಾಗಿರುತ್ತದೆ. 

ಇ.ಎಸ್.ಐ. ಸೌಲಭ್ಯವನ್ನು ನಂಬಿಕೊಂಡ ಬಡ ರೋಗಿಗಳು ಸೌಲಭ್ಯ ನಿರಾಕರಣೆಯಿಂದ ಆಗಾಗ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಇ.ಎಸ್.ಐ. ಯೋಜನೆಯಡಿ ನಗದು ರಹಿತ ಚಿಕಿತ್ಸೆಯು ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದೆ. ಇ.ಎಸ್.ಐ. ಸೌಲಭ್ಯ ಸಿಗದೆ ಜಿಲ್ಲೆಯ ಅನೇಕ ಕಾರ್ಮಿಕರು, ನೌಕರರು ಹಾಗೂ ಉದ್ಯೋಗಿಗಳು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರು ತೊಂದರೆಗೀಡಾಗಿದ್ದಾರೆ. 

ಅರ್ಹ ಕಾರ್ಮಿಕರ ಆರೋಗ್ಯ ರಕ್ಷಣೆ ಸರ್ಕಾರದ ಸಾಮಾಜಿಕ ಜವಾಬ್ದಾರಿಯಾಗಿದೆ. ಬಡ ಕುಟುಂಬಗಳ ಜೀವದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿರುವುದು ಖಂಡನೀಯ.  ಇ.ಎಸ್.ಐ. ಯೋಜನೆಯು ಯಾವುದೇ ಅಡಚಡಣೆಗಳಿಲ್ಲದೆ ನಿರಂತರವಾಗಿ ಫಲಾನುಭವಿಗಳಿಗೆ ದೊರಕುವಂತೆ ಮಾಡಿ ಸದ್ರಿ ಸಮಸ್ಯೆಗೆ ಸರಕಾರ ಶೀಘ್ರವಾಗಿ ಖಾಯಂ ಪರಿಹಾರ ಕೈಗೊಳ್ಳುವಂತೆ ಶಾಸಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.