ಉಡುಪಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಗೆ ರಚನೆಯಾಗಿರುವ ಎಸ್‌ಐಟಿ , ಆ ವ್ಯಾಪ್ತಿಯಲ್ಲಿ ದಾಖಲಾಗಿರುವ ಎಲ್ಲ ಅಪರಾಧ ಪ್ರರಕಣಗಳ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಇದೇ 16ರಂದು ಬೆಳ್ತಂಗಡಿಯಲ್ಲಿ 'ಮಹಿಳೆಯರ ಮೌನ ಮೆರವಣಿಗೆ ಮತ್ತು ಮಹಿಳಾ ನ್ಯಾಯ ಸಮಾವೇಶ' ಆಯೋಜಿಸಲಾಗಿದೆ ಎಂದು 'ಕೊಂದವರು ಯಾರು?' ಆಂದೋಲದನ ಜ್ಯೋತಿ ಎ. ತಿಳಿಸಿದರು.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು , ಈ ಹೋರಾಟಕ್ಕೆ ರಾಜ್ಯದ ವಿವಿಧೆಡೆಯ ಮಹಿಳೆಯರು ಆಗಮಿಸಲಿದ್ದಾರೆ. ಈಗಾಗಲೇ ಹೋರಾಟಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಸಮಾವೇಶಕ್ಕೆ ಅಗತ್ಯವಿರುವ ಅನುಮತಿಯನ್ನು ಸಂಬಂಧಿಸಿದ ಇಲಾಖೆಗಳಿಂದ ಪಡೆದಿದ್ದೇವೆ ಎಂದರು.
ಅಂದು ಬೆಳಿಗ್ಗೆ 10ಕ್ಕೆ ಬೆಳ್ತಂಗಡಿಯ ಮಾರಿಗುಡಿಯಿಂದ ತಾಲೂಕು ಕಚೇರಿ ಆವರಣದವರೆಗೆ ಸುಮಾರು ಒಂದು ಕಿ.ಮೀ ಮೌನ ಮೆರವಣಿಗೆ ನಡೆಯಲಿದೆ. ನಮಗೆ ಹೇಳಬೇಕಿರುವುದನ್ನು ಫಲಕಗಳ ಮೂಲಕ ಹೇಳುತ್ತೇವೆ. ನಾವು ಯಾರ ಮೇಲೂ ಆರೋಪ ಮಾಡುವುದಿಲ್ಲ. ಆ ಭಾಗದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಇವರೇ ಭಾಗಿಯಾಗಿದ್ದಾರೆ ಎಂದು ನಾವು ಯಾರತ್ತಲೂ ಬೆರಳು ಮಾಡುತ್ತಿಲ್ಲ. ಆದರೆ, ವ್ಯವಸ್ಥೆಯ ಲೋಪ ಪ್ರಶ್ನಿಸುತ್ತಿದ್ದೇವೆ. ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳು ಪತ್ತೆಯಾಗಿಲ್ಲ ಏಕೆ ಎಂಬುದು ನಮ್ಮೆಲ್ಲರ ಪ್ರಶ್ನೆಯಾಗಿದ್ದು, ಅದನ್ನು ಕೇಳುತ್ತೇವೆ' ಎಂದರು.
ಅದೇ ರೀತಿ ಈಗ ಎಸ್ ಐಟಿ ತನಿಖೆ ನಡೆಯುತ್ತಿದೆ.ಆದರೆ ದೂರುದಾರರು ಮತ್ತು ಸಾಕ್ಷಿದಾರರನ್ನೇ ಆರೋಪಿಗಳನ್ನಾಗಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ.ಎಸ್ ಐಟಿ ಮತ್ತು ಸರಕಾರ ಯಾರ ಒತ್ತಡಕ್ಕೂ ಮಣಿಯಬಾರದು .ಧರ್ಮಸ್ಥಳ ಆಸುಪಾಸಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆ ದಿನ ನಾವು ಸಾವಿರಾರು ಮಹಿಳೆಯರು ಒತ್ತಾಯಿಸಲಿದ್ದೇವೆ ಎಂದರು.
