ಉಡುಪಿ: ಕುಖ್ಯಾತ ಕಳ್ಳನ ಬಂಧನ: 65 ಲಕ್ಷ ಮೌಲ್ಯದ ಚಿನ್ನಾಭರಣ ವಶ

 


ಉಡುಪಿ: ಉಡುಪಿಯ ಶೈಲಾ ವಿಲ್ಹೆಲ್ ಮೀನಾ (53) ಅವರ ಮನೆಯ ಕಪಾಟಿನಲ್ಲಿಟ್ಟಿದ್ದ  ಸುಮಾರು 548.31 ಗ್ರಾಂ. ಚಿನ್ನಾಭರಣ  ಹಾಗೂ ಮೊಬೈಲ್ ಫೋನ್ ನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 207/2025 ಕಲಂ 331(3)331(4) 305  ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿತ್ತು. ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ಸುಕೇಶ ನಾಯ್ಕ  (37) ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಅಜ್ಜರಕಾಡು ಮನೆಯೊಂದರಲ್ಲಿ ಬಚ್ಚಿಟ್ಟಿದ್ದ. ಪೊಲೀಸರು 548.31 ಮಿ. ಗ್ರಾಂ ತೂಕದ 65,79,720 ರೂ ಮೌಲ್ಯದ  ಸೊತ್ತುಗಳನ್ನು ವಶಪಡಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಆರೋಪಿ ವಿರುದ್ದ ಈಗಾಗಲೇ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್‌  ಠಾಣೆಗಳಲ್ಲಿ ಒಟ್ಟು  11 ಮನೆಕಳ್ಳತನ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಉಡುಪಿ ನಗರ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದ್ದು 4 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಹಿರಿಯಡ್ಕ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 1 ಪ್ರಕರಣದಲ್ಲಿ  ಶಿಕ್ಷೆಯಾಗಿದೆ. ಬ್ರಹ್ಮಾವರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ ಹಾಗೂ ಮಣಿಪಾಲ ಠಾಣೆಯ 1 ಪ್ರಕರಣವು ನ್ಯಾಯಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.