ಉಡುಪಿ: ವರ್ಕ್ ಪ್ರಮ್ ಹೋಂ ಟಾಸ್ಕ್ ಹೆಸರಿನಲ್ಲಿ ಮಹಿಳೆಗೆ 31 ಲಕ್ಷ ರೂ.ವಂಚನೆ

ಸಾಂದರ್ಭಿಕ ಚಿತ್ರ

ಉಡುಪಿ: ವರ್ಕ್ ಪ್ರಮ್ ಹೋಂ ಟಾಸ್ಕ್ ಹೆಸರಿನಲ್ಲಿ ಮಹಿಳೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

ಉದ್ಯಾವರದ ವಿಜಯಲಕ್ಷ್ಮೀ  ವಂಚನೆಗೆ ಒಳಗಾದವರು. ಅವರು ಫೇಸ್‌ಬುಕ್‌ನಲ್ಲಿ ವರ್ಕ್ ಪ್ರಂ ಹೋಂ ಜಾಹೀರಾತು ನೋಡಿ ಅದರ ಮೇಲೆ ಕ್ಲಿಕ್ ಮಾಡಿದ್ದರು. ಆಗ ಅವರ ಮೊಬೈಲ್‌ಗೆ ವಾಟ್ಸ್ಆ್ಯಪ್ ಸಂದೇಶ ಬಂದಿದ್ದು, ತಾನು ಶೆನ್‌ಎಸ್‌ಇ ಕಾರ್ಪೊರೇಟ್ ಕಚೇರಿಯ ಎಚ್‌ಆರ್ ಎಂಬುದಾಗಿ ಪರಿಚಯಿಸಿಕೊಂಡ ಮಹಿಳೆಯೊಬ್ಬಳು ನಿಮಗೆ ನಮ್ಮಲ್ಲಿ ಅರೆಕಾಲಿಕ ಕೆಲಸ ಮಾಡಲು ಆಸಕ್ತಿ ಇದ್ದರೆ ಅರ್ಜಿ ತುಂಬಿ ಕಳುಹಿಸುವಂತೆ ಹೇಳಿ ಎರಡು ಲಿಂಕ್‌ಗಳನ್ನು ಕಳುಹಿಸಿದ್ದಳು. ಜತೆಗೆ 2 ಟಾಸ್ಕ್‌ ಗಳನ್ನೂ ನೀಡಿದ್ದಳು. ಟಾಸ್ಕ್ ಪೂರ್ಣಗೊಳಿಸಿದ್ದಕ್ಕೆ ಹಣ ಪಾವತಿಯಾಗಿತ್ತು.

ಡಿ. 1ರಂದು ಮತ್ತೊಂದು ಲಿಂಕ್ ಕಳುಹಿಸಿದ್ದು, ಆ ಲಿಂಕ್ ಒತ್ತಿದಾಗ ಟೆಲಿಗಾಮ್ ಖಾತೆಯೊಂದು ತೆರೆದಿತ್ತು. ಅವರು ಗುಹಾ ಅನುಸೂಯ ಎಂಬ ಟೆಲಿಗ್ರಾಮ್ ಖಾತೆ ನೀಡಿದ್ದು, ಅದಲ್ಲಿ 1,000 3,000 5,000ರಲ್ಲಿ ಒಂದನ್ನು ಆಯ್ಕೆ ಮಾಡಿದಲ್ಲಿ ಶೇ. 30ರಿಂದ ಶೇ. 40 ಲಾಭಾಂಶ ಗಳಿಸಬಹುದು ಎಂದು ತಿಳಿಸಿದ್ದರು. ಅದರಂತೆ ವಿಜಯಲಕ್ಷ್ಮೀ ಅವರು ಡಿ. 1ರಂದು 1,000 ರೂ. ಹಾಗೂ ಡಿ. 2ರಂದು 2,000 ರೂ.ಗಳನ್ನು ಯುಪಿಐ ಮುಖಾಂತರ ಅವರು ನೀಡಿದ ಕ್ಯುಆರ್ ಕೋಡ್‌ಗೆ ಕಳುಹಿಸಿದ್ದರು. ಅದಕ್ಕೆ ಪ್ರತಿಯಾಗಿ 3,900 ರೂ.ಗಳನ್ನು ಯುಪಿಐ ಮುಖಾಂತರ ವಾಪಸು ಹಾಕಿದ್ದರು. ಅನಂತರ ಹೆಚ್ಚಿನ ಆಮಿಷ ತೋರಿಸಿದ ಆರೋಪಿಗಳು ತಿಳಿಸಿದಂತೆ ಡಿ. 1ರಿಂದ 4ರ ವರೆಗೆ ಹಂತಹಂತವಾಗಿ 31,00,067 ರೂ. ಪಾವತಿ ಮಾಡಿದ್ದರು. ಆರೋಪಿಗಳು ವರ್ಕ್ ಪ್ರಮ್ ಹೋಂ ಟಾಸ್ಕ್ ಹೆಸರಿನಲ್ಲಿ ಈ ವರೆಗೆ ಹೂಡಿಕೆ ಮಾಡಿದ ಹಣ ಅಥವಾ ಅದರ ಲಾಭಾಂಶ ನೀಡದೆ ವಂಚಿಸಿದ್ದಾರೆ ಎಂದು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.