ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಕರ್ನಾಟಕ ದ್ವೇಷ ಭಾಷಣ (Hate Speech) ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಮಂಡನೆ ಆಗಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧೇಯಕ ಮಂಡಿಸಿದ್ದು, ಬಿಜೆಪಿ ವಿರೋಧಿಸಿದೆ. ಈಗಾಗಲೇ ಸಾಕಷ್ಟು ವಿವಾದ ಸೃಷ್ಟಿಸಿರುವ ವಿಧೇಯಕ ಬೇಡವೇ ಬೇಡ, ಅಂಗೀಕಾರ ಪ್ರಕ್ರಿಯೆ ವೇಳೆ ಮತಕ್ಕೆ ಹಾಕಬೇಕು ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದರು. ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ ಹಾಕುವ ವಿಧೇಯಕ ಇದಾಗಿದ್ದು, ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ ಎಂದು ವಿಧೇಯಕದಲ್ಲಿ ಕಾನೂನು ತಂದಿದ್ದಾರೆ.
ದ್ವೇಷ ಭಾಷಣ ನಿಯಂತ್ರಣ ವಿಧೇಯಕದಲ್ಲಿ ಏನಿದೆ?
ದ್ವೇಷ ಭಾಷಣ ಪ್ರಸರಣೆ, ಪ್ರಕಟಣೆ, ಪ್ರಚಾರ ತಡೆಯಲು ವಿಧೇಯಕ.
ನಿರ್ದಿಷ್ಟ ವ್ಯಕ್ತಿ, ಸಮೂಹ, ಸಂಸ್ಥೆಗಳ ವಿರುದ್ಧ ದ್ವೇಷ ಹುಟ್ಟಿಸುವ ಅಪರಾಧಗಳ ತಡೆಗೆ ವಿಧೇಯಕ
ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ.
ಅಪರಾಧ ಪುನರಾವರ್ತನೆ ಆದರೆ ಕನಿಷ್ಠ 2 ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ.
ದ್ವೇಷ ಭಾಷಣ ಮಾಡಿ ಕೇಸ್ ಬಿದ್ದರೆ ಅದು ಜಾಮೀನು ರಹಿತ ಪ್ರಕರಣ.
ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ದ್ವೇಷ ಭಾಷಣಗಳ ವಿಚಾರಣೆ ಮಾಡಬೇಕು.
ದ್ವೇಷ ಭಾಷಣಗಳ ಪ್ರಕರಣಗಳನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪಪೊಲೀಸ್ ವರಿಷ್ಠಾಧಿಕಾರಿ ದರ್ಜೆಗಿಂತ ಕಡಿಮೆ ಇಲ್ಲದ ಯಾರೇ ಪೊಲೀಸ್ ಅಧಿಕಾರಿಯು ಮಾಹಿತಿ ಸ್ವೀಕರಿಸಿದರೆ ವಿಚಾರಣೆ ಮಾಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಬಹುದು.
ಈ ಕಾಯ್ದೆಯಡಿ ದ್ವೇಷ ಭಾಷಣಗಳಿಗೆ ನೋಂದಾಯಿತ ಅಥವಾ ನೋಂದಾಯಿತವಲ್ಲದ ಸಂಘ ಸಂಸ್ಥೆಗಳೂ ಹೊಣೆಗಾರರಾಗಿರುತ್ತಾರೆ.
ದ್ವೇಷ ಭಾಷಣಗಳ ಕಂಟೆಂಟ್‌ಗಳನ್ನು ಡೊಮೈನ್‌ನಿಂದ ಬ್ಲಾಕ್ ಮಾಡುವ ಅಥವಾ ತೆಗೆದು ಹಾಕುವ ಅಧಿಕಾರವೂ ಗೊತ್ತುಪಡಿಸಿದ ಅಧಿಕಾರಿಗಳಿಗೆ ವಿಧೇಯಕ ಕೊಟ್ಟಿದೆ.
