ಕುಂದಾಪುರ: ಯಕ್ಷಗಾನದ ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ

ಕಂದಾವರ ರಘುರಾಮ‌ ಶೆಟ್ಟಿ

ಕುಂದಾಪುರ: ಯಕ್ಷಗಾನ ರಂಗದ  ಸಾಧಕ, ಪ್ರಸಂಗಕರ್ತ,ಖ್ಯಾತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ ಅವರು ಬುಧವಾರ ಬೆಳಗ್ಗೆ (ನ26) ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ, ನಾಟಕ ಕಲಾವಿದರಾಗಿ ರಘುರಾಮ ಶೆಟ್ಟಿ ಯಕ್ಷಗಾನ ವಲಯದಲ್ಲಿ ಕಂದಾವರದವರು ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದರು.

ಕಂದಾವರ ರಘುರಾಮ ಶೆಟ್ಟಿಯವರು ದಕ್ಷಿಣ ಕನ್ನಡದ ಕುಂದಾಪುರ ತಾಲೂಕಿನ ಬಳ್ಳೂರು ಗ್ರಾಮದ ಕಂದಾವರದಲ್ಲಿ 1936 ರಲ್ಲಿ ಕರ್ಕಿ ಸದಿಯಣ್ಣ ಶೆಟ್ಟಿ. ತಾಯಿ ಕಂದಾವರ ಪುಟ್ಟಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದರು.

ತಮ್ಮ ಪತ್ನಿ, ಮಕ್ಕಳು ಮೊಮ್ಮಕ್ಕಳ ಜತೆ ನೂಜಾಡಿ ಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ತಮ್ಮ ಆರಂಭದ ಬದುಕಿನಲ್ಲಿ ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯರಾಗಿ, ಸುಮಾರು 35 ವರ್ಷಗಳ ಕಾಲ ಸೇವೆ ಮಾಡಿದ್ದ ಕಂದಾವರ ರಘುರಾಮ ಶೆಟ್ಟಿಯವರು, 'ಮಾದರಿ ಶಿಕ್ಷಕ' ಪ್ರಶಸ್ತಿಗೆ ಭಾಜನರಾಗಿದ್ದರು.

ಸಾಹಿತ್ಯ,ಸಂಗೀತ,ಯಕ್ಷಗಾನ ರಂಗದಲ್ಲಿ ಕಂದಾವರ ರಘುರಾಮ ಶೆಟ್ಟಿಯವರು ವಿದ್ಯಾರ್ಥಿಯಾಗಿದ್ದಾಗಲೇ ಮಕ್ಕಳ ಯಕ್ಷಗಾನದಲ್ಲಿ ಭಾಗವತಿಗೆ ಮಾಡಿ ಬಾಲ ಭಾಗವತ ಎಂದು ಖ್ಯಾತರಾಗಿದ್ದರು. ದಿವಂಗತ ಎಂ.ಎಂ.ಹೆಗ್ಡೆಯವರ ಕೂಟದಲ್ಲಿ ಹವ್ಯಾಸಿಯಾಗಿ ಪಾತ್ರನಿರ್ವಹಣೆ ಮಾಡುತ್ತಿದ್ದರು. ಅರ್ಥಧಾರಿಯಾಗಿಯೂ ಖ್ಯಾತನಾಮ ಅರ್ಥಧಾರಿಗಳ ಜತೆ 'ತಾಳಮದ್ದಲೆ'ಯಲ್ಲಿಯೂ ಖ್ಯಾತಿ ಪಡೆದಿದ್ದರು.

ಕಂದಾವರ ರಘುರಾಮ ಶೆಟ್ಟಿಯವರ ನಿಧನದಿಂದ ಯಕ್ಷಗಾನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ  ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿ ಸರ್ವ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.