ಬೆಂಗಳೂರು: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ಶಾಕ್ ಕೊಟ್ಟಿದೆ. ವಿಚಾರಣಾಧೀನ ನ್ಯಾಯಾಲಯ ಸಂಜ್ಞೆ ಪರಿಗಣಿಸಿರುವುದು ಮತ್ತು ಸಮನ್ಸ್ ಜಾರಿ ಮಾಡಿರುವುದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಪೋಕ್ಸೋ ಪ್ರಕರಣದಲ್ಲಿ ಸಂಜ್ಞೆ ಪರಿಗಣಿಸಿರುವುದನ್ನು ರದ್ದುಪಡಿಸುವಂತೆ ಕೋರಿ ಬಿಎಸ್ ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿರುವ ಅರ್ಜಿಯನ್ನು ಕೆಲ ತಿಂಗಳುಗಳಿಂದ ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿತ್ತು. ಗುರುವಾರ ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠವು ಆದೇಶ ನೀಡಿದೆ. ಇದು ಯಡಿಯೂರಪ್ಪ ಅವರಿಗೆ ಭಾರೀ ಹಿನ್ನಡೆ ಉಂಟು ಮಾಡಿದೆ. ಸಿಐಡಿ ವಿಚಾರಣೆಯು ಮುಂದುವರೆಯಲಿದೆ.
ವಿಚಾರಣೆಗೆ ಅಗತ್ಯವಿಲ್ಲದಿದ್ದರೆ ಒತ್ತಾಯಿಸಬಾರದು:
ವಿಚಾರಣಾ ಹಂತದಲ್ಲಿ ಯಡಿಯೂರಪ್ಪ ಅವರ ಅಗತ್ಯವಿಲ್ಲದಿದ್ದರೆ ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸಬಾರದು. ಉಪಸ್ಥಿತಿ ಅಗತ್ಯವಿಲ್ಲದಿದ್ದರೆ ಅವರ ಪರವಾಗಿ ಸಲ್ಲಿಕೆ ಮಾಡುವ ವಿನಾಯಿತಿ ಮನವಿಯನ್ನು ವಿಚಾರಣಾಧೀನ ನ್ಯಾಯಾಲಯ ಪುರಸ್ಕರಿಸಬೇಕು ಎಂದು ನ್ಯಾಯಾಲಯ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಪ್ರಕರಣದ ಹಿನ್ನೆಲೆ:
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ಅವರ 17 ವರ್ಷದ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ, ಯಡಿಯೂರಪ್ಪ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
