![]() |
| ಸೋನಿಯಾ-ರಾಹುಲ್ |
ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿಯ ಆರೋಪ ದಾಖಲಾಗಿದೆ. ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದಿಂದ ಹೊಸ ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ದಾಖಲಿಸಿಕೊಳ್ಳಲಾಗಿದ್ದು, ಒಟ್ಟು ಆರು ಜನರ ಮೇಲೆ ಪ್ರಕರಣ ದಾಖಲಾಗಿದೆ.
ಎಫ್‌ಐಆರ್‌ನಲ್ಲಿರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಜೊತೆಗೆ ಸ್ಯಾಮ್ ಪಿತ್ರೋಡಾ ಮತ್ತು ಇತರ ಮೂರು ವ್ಯಕ್ತಿಗಳ ಹೆಸರನ್ನು ಹಾಗೂ ಮೂರು ಕಂಪನಿಗಳಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ , ಯಂಗ್ ಇಂಡಿಯನ್, ಮತ್ತು ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ದುಸ್ಥಿತಿಯಲ್ಲಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮೂಲ ಕಂಪನಿಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು 'ವಂಚನೆಯ ಮೂಲಕ ಸ್ವಾಧೀನಪಡಿಸಿಕೊಳ್ಳಲು' ಕ್ರಿಮಿನಲ್ ಪಿತೂರಿ ನಡೆಸಲಾಗಿದೆ ಎಂದು ಎಫ್‌ಐಆರ್ ಆರೋಪಿಸಿದೆ.
ಏನಿದು ಪ್ರಕರಣ ?
ಕೋಲ್ಕತ್ತಾ ಮೂಲದ ಶೆಲ್ ಕಂಪನಿ (ನಕಲಿ ಕಂಪನಿ) ಎಂದು ಹೇಳಲಾಗುವ ಡೋಟೆಕ್ಸ್ ಮರ್ಚಂಡೈಸ್ ಕಂಪನಿಯು ಯಂಗ್ ಇಂಡಿಯನ್ ಎಂಬ ಲಾಭರಹಿತ ಕಂಪನಿಗೆ 1 ಕೋಟಿ ರೂ. ನೀಡಿದೆ. ಯಂಗ್ ಇಂಡಿಯನ್‌ನಲ್ಲಿ ಗಾಂಧಿ ಕುಟುಂಬ ಶೇ. 76 ರಷ್ಟು ಷೇರುಗಳನ್ನು ಹೊಂದಿದೆ. ಈ ವ್ಯವಹಾರದ ಮೂಲಕ, ಯಂಗ್ ಇಂಡಿಯನ್ ಕಂಪನಿಯು ಕಾಂಗ್ರೆಸ್‌ಗೆ 50 ಲಕ್ಷ ರೂ. ಪಾವತಿಸಿ, ಸುಮಾರು 2,000 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಹೊಂದಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪನಿಯ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ಆರೋಪಿಸಲಾಗಿದೆ.
