ಉಡುಪಿ: ಸಾಂಕ್ರಾಮಿಕ ರೋಗಗಳಿಗೆ ಆಯುರ್ವೇದ ಪರಿಹಾರ - ಉಪಕುಲಪತಿ ಡಾ.ಭಗವಾನ್ ಬಿ.ಸಿ



ಉಡುಪಿ: ಬದಲಾದ ಜೀವನ ಶೈಲಿಯಿಂದಾಗಿ ಸಂಭವಿಸುವ ವಿವಿಧ ಕಾಯಿಲೆಗಳ ತಡೆ ಹಾಗೂ ಸಾಂಕ್ರಾಮಿಕ ರೋಗಗಳಿಗೆ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾಗಲಿದೆ. ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ಎಂದು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಭಗವಾನ್ ಬಿ.ಸಿ. ಹೇಳಿದರು.

ಇಲ್ಲಿನ ಕುತ್ಪಾಡಿ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಸಂಶೋಧನ ಕೇಂದ್ರದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.





ಭಾರತದ ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದ ರೋಗ ಚಿಕಿತ್ಸೆಗಿಂತ ರೋಗ ಬಾರದಂತೆ ತಡೆಯಲು ಸಹಕಾರಿ. ರೋಗಿಯ ದೈಹಿಕ ಮತ್ತು ಮಾನಸಿಕ ಪರೀಕ್ಷೆ ಮೂಲಕ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದು, ಅದು ರೋಗದ ಆಮೂಲಾಗ್ರ ನಿವಾರಣೆಗೆ ಸಹಕಾರಿ. ಶುದ್ಧ ಆಯುರ್ವೇದ ಪದ್ಧತಿಯನ್ನು ವೈದ್ಯರು ಅಳವಡಿಕೊಳ್ಳುವಂತೆ ಸಲಹೆ ನೀಡಿದರು.

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಡಾ. ಅರುಂಧತಿ ಪ್ರಸಾದ್ ಮತ್ತು ಡಾ. ಅಪರ್ಣ ಎಮ್.ಎಸ್. ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಸ್ನಾತಕ ವಿದ್ಯಾರ್ಥಿನಿ ಡಾ. ಇಂಪನ ಪರಶುರಾಮ ಅಗಡಿ ಅವರಿಗೆ 2024ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿನಿ ಪ್ರಮಾಣ ಪತ್ರ ನೀಡಲಾಯಿತು.



ಕಾಲೇಜಿನ ಆಡಳಿತ ಮುಖ್ಯಾಧಿಕಾರಿ ಡಾ. ಪ್ರಶಾಂತ್ ಕೆ. 68 ಸ್ನಾತಕ ಮತ್ತು 50 ಸ್ನಾತಕೋತ್ತರ ವಿದ್ಯಾರ್ಥಿಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಶ್ರೀಕಾಂತ್ ಪಿ. ಹಾಗೂ ಸ್ನಾತಕ ವಿಭಾಗದ ಡೀನ್ ಡಾ. ಪೃಥ್ವಿರಾಜ್ ಪುರಾಣಿಕ್ ವಿದ್ಯಾರ್ಥಿಗಳಿಗೆ ಪದವಿ ಪತ್ರ ಪಡೆಯಲು ಆಹ್ವಾನಿಸಿದರು. 



ಸಿಂಡಿಕೇಟ್ ಸದಸ್ಯ ಡಾ. ಮಧುಸೂದನ್, ಸೆನೆಟ್ ಸದಸ್ಯ ಡಾ.ಸಂಕನ್ ಗೌಡ ಪಾಟೀಲ್ಹಾ ಹಾಗೂ ಬೋರ್ಡ್ ಆಫ್ ಸ್ಟಡೀಸ್ (ಸ್ನಾತಕ) ವಿಭಾಗದ ಅಧ್ಯಕ್ಷ ಡಾ.ಲೀಲಾಧರ ಡಿ.ವಿ. ಇದ್ದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಶ್ರೀಕಾಂತ್ ಪಿ. ವಂದಿಸಿದರು. ಸಹ ಪ್ರಾಧ್ಯಾಪಕರಾದ ಡಾ. ಅರ್ಹಂತ್ ಕುಮಾರ್ ಹಾಗೂ ಸಹಾಯಕ ಡಾ. ಕಾವ್ಯ ನಿರೂಪಿಸಿದರು.