ಕೋಟ: ಪಾರಂಪಳ್ಳಿಯಲ್ಲಿ ಘನ ತ್ಯಾಜ್ಯ ಘಟಕ ಉದ್ಘಾಟಿಸಿದರೆ ಕಪ್ಪು ಬಾವುಟ ಪ್ರದರ್ಶನ - ಕೋಟ ನಾಗೇಂದ್ರ ಪುತ್ರನ್

ಸುದ್ದಿಗೋಷ್ಟಿ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಪಾರಂಪಳ್ಳಿಯಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಘನ  ತ್ಯಾಜ್ಯ ಘಟಕ ಕಾನೂನಿಗೆ ವಿರುದ್ಧವಾಗಿದ್ದು ಇದರ ಉದ್ಘಾಟನೆಯಲ್ಲಿ ಯಾವುದೇ ಜನಪ್ರತಿನಿಧಿಗಳು ಭಾಗವಹಿಸಬಾರದು ಹಾಗೂ ಉದ್ಘಾಟನೆಯನ್ನೇ ರದ್ದುಗೊಳಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯರು ಒತ್ತಾಯಿಸಿದ್ದಾರೆ. 

ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಪಾರಂಪಳ್ಳಿ ಗ್ರಾಮದ ಸರ್ವೇ ನಂಬ್ರ 104/24, 25 ರಲ್ಲಿ, ಘನ ತ್ಯಾಜ್ಯ ಘಟಕ ಉದ್ಘಾಟನೆಗೆ ಮುಂದಾಗಿದೆ.ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ಬಾರಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರೂ ಕೂಡ ಸಾರ್ವಜನಿಕರನ್ನು ಕಡೆಗಣಿಸಲಾಗಿದೆ. ಸುತ್ತ ಮುತ್ತಲಿನ ಕೃಷಿ ಭೂಮಿ, ಪರಿಸರಕ್ಕೆ ಮಾರಕವಾಗಿ ಮತ್ತು ಸಾಂಕ್ರಾಮಿಕ ರೋಗಗಳನ್ನು ಹರಡುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಈ ಘನ ತ್ಯಾಜ್ಯ ಘಟಕ / ಕಸ ವಿಲೇವಾರಿ ಘಟಕ ತೆರೆಯಲಾಗಿದೆ. 

ಇದೇ ಜಾಗದಲ್ಲಿ ಈ ಹಿಂದೆ ಮೀನು ಸಂಸ್ಕರಣ ಘಟಕವನ್ನು ಪ್ರಾರಂಭಿಸಿದಾಗ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ನಿರ್ಮಾಣದ ಹಂತದಲ್ಲಿದ್ದ ಮೀನು ಸಂಸ್ಕರಣ ಘಟಕವನ್ನು ಮುಚ್ಚಿಸಿದ್ದರು. ಕಾನೂನಿನ ಪ್ರಕಾರ "CRZ" ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ, ಹಾಗೆ ಎಸ್, ಡಬ್ಲ್ಯೂ, ಎಂ ಅಡಿಯಲ್ಲಿ ಕೃಷಿಭೂಮಿಯ ಬಳಿ ತ್ಯಾಜ್ಯ ನಿರ್ವಹಣೆ ಘಟಕ ಮಾಡುವಂತಿಲ್ಲ. ಇಷ್ಟೆಲಾ ಗೊಂದಲಗಳ ನಡುವೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ಸಮೇತ ಈ ಜಾಗ ಖರೀದಿಸಿದ್ದು ಹೇಗೆ ?

ಇಲ್ಲಿ ಸಂಪೂರ್ಣವಾಗಿ ಅಧಿಕಾರ ದುರುಪಯೋಗ ಹಾಗೂ ದೊಡ್ಡ ಮಟ್ಟದಲ್ಲಿ ರಾಜಕೀಯ ನಾಯಕರ ಸಮೇತ ಭ್ರಷ್ಟಾಚಾರ ನಡೆದಿರುವುದು ಗೋಚರಿಸುತ್ತಾ ಇದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ‌ ನಾಗೇಂದ್ರ ಪುತ್ರನ್, ಮಹೇಶ್ ಪೂಜಾರಿ, ಸಂತೋಷ್ ಪೂಜಾರಿ, ಅಶೋಕ್ ಪೂಜಾರಿ, ನಾಗರಾಜ್, ಗಣೇಶ್ ಉಪಸ್ಥಿತರಿದ್ದರು.