ಉಡುಪಿ: ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ ಹಾಗೂ ಬಳಕೆಗೆ ಕಡಿವಾಣ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ

ಕರವೇಯಿಂದ ಮನವಿ

ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ ಹಾಗೂ ಬಳಕೆಗೆ ಕಡಿವಾಣ ಹಾಕುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿಯನ್ನು ನೀಡಲಾಯಿತು.

ಉಡುಪಿ ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆಯಿಂದಾಗಿ ಎಷ್ಟೋ ಯುವಕರು ದಾರಿ ತಪ್ಪಿ ಅವರ ಕುಟುಂಬಗಳು ಬೀದಿಗೆ ಬಂದಿವೆ. ಕೆಲವು ಜಾಗಗಳಲ್ಲಿ ಮಾದಕ ವಸ್ತುಗಳು ಅಂಗಡಿಗಳಲ್ಲಿ ಚಾಕಲೇಟ್ ದೊರೆಯುವಷ್ಟು ಸಲೀಸಾಗಿ ದೊರೆಯುತ್ತಿರುವುದು ದುರಾದೃಷ್ಟಕರ.ಇದಕ್ಕೆ ಬಲಿಯಾಗಿರುವ ಮಕ್ಕಳ ತಂದೆ-ತಾಯಿಯರ ರೋದನೆ  ಹೇಳತೀರದ್ದು.ಇತ್ತೀಚೆಗೆ ಹನಿಟ್ರ್ಯಾಪ್‌ನಂತಹ ಜಾಲಕ್ಕೆ ಸಿಲುಕಿ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೈದಿರುವ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅಭಿಷೇಕ್‌ ಆಚಾರ್ಯ ನ ವಿಚಾರದಲ್ಲಿ ಸಂಘಟನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಗಮನ ಸೆಳೆಯಿತು. ಈ ವಿಚಾರದಲ್ಲಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿ, ಇದರ ಹಿಂದಿರುವ ಜಾಲವನ್ನು ಬಯಲಿಗೆಳೆದು ಸತ್ಯಾ ಸತ್ಯತೆಯನ್ನು ಜನತೆಯ ಮುಂದಿಡಬೇಕು ಎಂದು ಸಂಘಟನೆಯ ಪರವಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ  ಕರವೇ ಗೌರವಾಧ್ಯಕ್ಷ ಅನ್ಸಾರ್ ಅಹಮದ್, ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ,ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಸೇರಿಗಾರ್ತಿ, ಉಪಾಧ್ಯಕ್ಷ ಸೈಯದ್ ನಿಜಾಮುದ್ದೀನ್, ಮಹಿಳಾ ಉಪಾಧ್ಯಕ್ಷೆ ದೇವಕಿ ಬಾರ್ಕೂರು ಕಿರಣ್ ಪ್ರತಾಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನುಷಾ ಆಚಾರ್ ಪಳ್ಳಿ, ಗೌರವ ಸಲಹೆಗಾರರಾದ ಜಯ ಪ್ರಕಾಶ್ ಶೆಟ್ಟಿ ಮತ್ತಿತರರು ಇದ್ದರು.