ಉಡುಪಿ, ಸೆ. 3: ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ, ತಾರ್ಕಿಕವಾಗಿ ಚಿಂತಿಸುವ ಹಾಗೂ ವಿಚಾರಗಳನ್ನು ವಿಶ್ಲೇಷಿಸುವ ಮನೋಭಾವವನ್ನು ಬೆಳೆಸುವ ಮೂಲಕ ಅವರನ್ನು ಸ್ವತಂತ್ರ ಮತ್ತು ವಿಮರ್ಶಾತ್ಮಕ ಚಿಂತಕರನ್ನಾಗಿ ರೂಪಿಸುವುದು ಶಿಕ್ಷಕರ ಪ್ರಮುಖ ಹೊಣೆಗಾರಿಕೆಯಾಗಿದೆ ಎಂದು ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ ಕೇಂದ್ರದ ನಿರ್ದೇಶಕ ಪ್ರೊ. ಸುಧೀರ್ ರಾಜ್ ಕೆ. ಹೇಳಿದರು.
ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯೂಎಸಿ ವತಿಯಿಂದ ಆಯೋಜಿಸಿದ್ದ ‘ಶಿಕ್ಷಕರ ಕಾರ್ಯಕ್ಷಮತೆಗಾಗಿ ಭಾರತೀಯ ಜ್ಞಾನ ವ್ಯವಸ್ಧೆ’ ಎಂಬ ಬೋಧಕ ಅಭಿವೃದ್ಧಿ ಕಾರ್ಯಕ್ರಮ (Faculty Development Programme)ದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತೀಯ ಜ್ಞಾನ ವ್ಯವಸ್ಥೆಯು ಮನೋವಿಜ್ಞಾನ, ಗಣಿತ, ವಿಜ್ಞಾನ, ಆಡಳಿತ ವ್ಯವಸ್ಥೆ ಹಾಗೂ ಮೌಲ್ಯಗಳನ್ನು ಸಮನ್ವಯಗೊಳಿಸಿಕೊಂಡಿರುವ ಸಮಗ್ರ ಜ್ಞಾನ ಪರಂಪರೆಯಾಗಿದೆ. ವಿದ್ಯಾರ್ಥಿಗಳು ಜ್ಞಾನದ ವಿಸ್ತಾರವಾದ ಗ್ರಹಿಕೆ ಹಾಗೂ ವಿಷಯದ ಆಳವಾದ ಪರಿಣತಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಅವರು ಸಮಗ್ರ ವ್ಯಕ್ತಿತ್ವ ಹೊಂದಿದವರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನನ್ನು ಸೋಲಿನ ಮನೋಭಾವದಿಂದ ವಿಜಯದತ್ತ ಕೊಂಡೊಯ್ದು, ಆತನಲ್ಲಿದ್ದ ಸಾಮರ್ಥ್ಯವನ್ನು ಅರಿತುಕೊಳ್ಳುವಂತೆ ಮಾಡಿದನು. ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವಾಗ ಅವರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಹೊರತರುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು ಎಂಬ ಮಹತ್ವದ ಸಂದೇಶ ಇದರಿಂದ ದೊರೆಯುತ್ತದೆ ಎಂದು ಹೇಳಿದರು.
ಭಗವದ್ಗೀತೆಯು ಜೀವನದ ವಿಜ್ಞಾನವೂ ಹೌದು, ತತ್ತ್ವಶಾಸ್ತ್ರವೂ ಹೌದು. ಮನಸ್ಸಿನ ನಿರ್ವಹಣೆ ಹಾಗೂ ಸಕಾರಾತ್ಮಕ ಮನೋವಿಜ್ಞಾನದ ದೃಷ್ಟಿಯಿಂದಲೂ ಅದರಲ್ಲಿ ಮಹತ್ವದ ಪಾಠಗಳಿವೆ. ಶಿಕ್ಷಕರು ತಾವು ಬೋಧಿಸುವ ವಿಷಯವನ್ನು ಆಳವಾಗಿ ಅರ್ಥಮಾಡಿಕೊಂಡಾಗ ಆತ್ಮವಿಶ್ವಾಸದಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಭಾರತೀಯ ಜ್ಞಾನ ವ್ಯವಸ್ಥೆಯು ಯಾವುದೇ ಭೌಗೋಳಿಕ ಗುರುತಿಗೆ ಸೀಮಿತವಾಗಿಲ್ಲ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಸಮಗ್ರ ಮಾನವ ಕಲ್ಯಾಣದ ಆಶಯ ಹಾಗೂ ಎಲ್ಲ ದಿಕ್ಕುಗಳಿಂದ ಜ್ಞಾನವನ್ನು ಸ್ವೀಕರಿಸುವ ಮುಕ್ತ ಮನೋಭಾವ ಅದರ ಮೂಲತತ್ತ್ವಗಳಾಗಿವೆ. ಇದು ವಿದ್ಯಾರ್ಥಿಗಳಲ್ಲಿ ಸಮಗ್ರ ಚಿಂತನೆಯನ್ನು ಬೆಳೆಸುತ್ತದೆ ಎಂದು ಹೇಳಿದರು.
ಶಿಕ್ಷಕರು ತಮ್ಮ ಬೋಧನೆಯ ಮೂಲಕ ಕಲ್ಪನಾ ಲೋಕದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ವಾಸ್ತವದ ಅರಿವಿನತ್ತ ಕೊಂಡೊಯ್ಯಬೇಕು. ಪ್ರಶ್ನಿಸಲು, ಕಾರಣಗಳನ್ನು ಹುಡುಕಲು ಮತ್ತು ವಿಚಾರಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಮೂಲಕ ಅವರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆ ಅಗತ್ಯ: ಡಾ. ಗೋಪಾಲಾಚಾರ್
ಭಾರತೀಯ ಜ್ಞಾನ ಪರಂಪರೆಯ ಮೇಲೆ ಬಾಹ್ಯ ಶಕ್ತಿಗಳ ಪ್ರಭಾವದಿಂದ ಉಂಟಾದ ನಾಶದ ಕುರಿತು ವಿಷಾದ ವ್ಯಕ್ತಪಡಿಸಿದ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ. ಗೋಪಾಲಾಚಾರ್, ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಪ್ರಾಚೀನ ಭಾರತೀಯ ಹಸ್ತಪ್ರತಿಗಳ ಸಮೀಕ್ಷೆ, ದಾಖಲಾತಿ, ಸಂರಕ್ಷಣೆ ಹಾಗೂ ಡಿಜಿಟಲೀಕರಣಕ್ಕಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ಆರಂಭಿಸಿರುವ ಜ್ಞಾನ ಭಾರತಂ ಅಭಿಯಾನ ಈ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಅವರು ಹೇಳಿದರು.
ಹಸ್ತಪ್ರತಿಗಳು ಭಾರತದ ಜ್ಞಾನ ಪರಂಪರೆಯ ಪ್ರಮುಖ ಆಕರಗಳಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯಾರ ಬಳಿಯಲ್ಲಾದರೂ ಪ್ರಾಚೀನ ಹಸ್ತಪ್ರತಿಗಳು ಇದ್ದಲ್ಲಿ ಅವುಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.
ಭಾರತೀಯ ಜ್ಞಾನ ಪರಂಪರೆಯ ಪ್ರಮುಖ ಆಕರಗಳಾಗಿರುವ ಶಾಸ್ತ್ರಗಳು ಹಾಗೂ ಗ್ರಂಥಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನ ಮಾತನಾಡಿ, ಭಾರತೀಯ ಸಾಂಪ್ರದಾಯಿಕ ಜ್ಞಾನ ಮತ್ತು ಪರಂಪರೆಯನ್ನು ಅಳವಡಿಸಿಕೊಳ್ಳುವುದರಿಂದ ವ್ಯಕ್ತಿತ್ವ ಸಶಕ್ತಗೊಳ್ಳುತ್ತದೆ. ಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನದ ನಿರಂತರ ಅನ್ವೇಷಣೆಯಲ್ಲಿ ತೊಡಗುವುದರಿಂದ ಚಲನಶೀಲ ಹಾಗೂ ಕ್ರಿಯಾಶೀಲರಾಗಲು ಸಾಧ್ಯ ಎಂದರು.
ಐಕ್ಯೂಎಸಿ ಸಂಯೋಜಕಿ ಪ್ರೊ. ಶ್ರೀಮತಿ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಕೃಷ್ಣರಾಜ್ ಭಟ್ ಅತಿಥಿಗಳನ್ನು ಪರಿಚಯಿಸಿದರು.
ಸಹಾಯಕ ಪ್ರಾಧ್ಯಾಪಕ ಶರತ್ ಕುಮಾರ್ ವಂದಿಸಿದರು.


