ಉಡುಪಿ ಎಪಿಎಂಸಿ ಅಧಿಕಾರಿಗಳ ದೌರ್ಜನ್ಯ, ಅವ್ಯವಹಾರದ ಆರೋಪ: ಉರುಳುಸೇವೆ ಮೂಲಕ ಪ್ರತಿಭಟನೆ

 


ಉಡುಪಿ: ಉಡುಪಿ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಸ್ಥೆ ಹಾಗೂ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಎಪಿಎಂಸಿ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಕಳೆದ ಸುಮಾರು ಮೂರು ವರ್ಷ ಏಳು ತಿಂಗಳಿನಿಂದ ಎಪಿಎಂಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಾ ಬಂದಿದ್ದೇವೆ. ಪ್ರಸಕ್ತ ಕರ್ತವ್ಯದಲ್ಲಿರುವ ಲೆಕ್ಕಿಗ ಹಾಗೂ ಕಾರ್ಯದರ್ಶಿ ಸೇರಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇರುವುದಾಗಿ ಪ್ರತಿಭಟನಾಕಾರರು ಆರೋಪಿಸಿದರು.




ಎಪಿಎಂಸಿಯ ಸರ್ಕಾರಿ ವಾಹನವನ್ನು ಲೆಕ್ಕಿಗ ಹಾಗೂ ಚಾಲಕರು ಸ್ವಂತ ಬಳಕೆಗೆ ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಖಾಲಿ ನಿವೇಶನ ಎಂದು ಹೇಳಿ ಅಭಿವೃದ್ಧಿಪಡಿಸಲಾದ ನಿತ್ಯಮಾರುಕಟ್ಟೆ ನಿವೇಶನವನ್ನು ‘ಲೀಸ್ ಆ್ಯಂಡ್ ಸೇಲ್’ ಹೆಸರಿನಲ್ಲಿ ತಮಗೆ ಬೇಕಾದವರಿಗೆ ಕಡಿಮೆ ಬೆಲೆಗೆ ನೀಡಲಾಗಿದೆ ಎಂದು ದೂರಿದರು.

2020ರ ಜೂನ್ 16ರಂದು ಅಂದಿನ ಉಡುಪಿ ಶಾಸಕ ಹಾಗೂ ಸಂಸದರು ಉದ್ಘಾಟಿಸಿದ್ದ ನಿತ್ಯಮಾರುಕಟ್ಟೆ ನಿವೇಶನದಲ್ಲಿದ್ದ ಸುಮಾರು ₹40 ಲಕ್ಷ ಮೌಲ್ಯದ ಇಂಟರ್‌ಲಾಕ್, ಶೆಡ್‌ಗಳು ಹಾಗೂ ಬೆಲೆಬಾಳುವ ಮರಗಳನ್ನು ಕೆಲವರು ನಾಶಪಡಿಸಿದ್ದಾರೆ. ಈ ಕೃತ್ಯದಲ್ಲಿ ಎಪಿಎಂಸಿ ಲೆಕ್ಕಿಗ ಶಾಮೀಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅದೇ ರೀತಿ ನಿತ್ಯಮಾರುಕಟ್ಟೆಯಲ್ಲಿ ನಿರ್ಮಿಸಲಾಗುತ್ತಿರುವ ದಾಸ್ತಾನು ಮಳಿಗೆಗಳನ್ನು ನಾಲ್ವರು ವರ್ತಕರು ಕಾಮಗಾರಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಅಕ್ರಮ ಕಾಮಗಾರಿಯನ್ನು ರದ್ದುಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ಆವರಣದಲ್ಲಿರುವ ದೇವರ ಮರವಾದ ಅತ್ತಿಮರಕ್ಕೆ ಕಿಡಿಗೇಡಿಗಳು ರಾಸಾಯನಿಕ ಹಾಕಿ ಹಾನಿಗೊಳಿಸಿದ್ದಾರೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಸುಮಾರು 175 ನಿತ್ಯ ಹರಾಜು ಕಟ್ಟೆಗಳಲ್ಲಿ ಕೆಲವು ಕಡೆಗಳಲ್ಲಿ ವರ್ತಕರು ಯಾವುದೇ ಪರವಾನಗಿ ಪಡೆಯದೆ ವ್ಯಾಪಾರ ನಡೆಸುತ್ತಿದ್ದಾರೆ. ರಾತ್ರಿ ಸುಮಾರು 3 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಪರವಾನಗಿ ಇಲ್ಲದ ವ್ಯಾಪಾರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಎಪಿಎಂಸಿಯಲ್ಲಿನ ಅಕ್ರಮ, ಅವ್ಯವಹಾರ ಮತ್ತು ಅವ್ಯವಸ್ಥೆಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಕ್ರಮ ಕಾಮಗಾರಿಗಳು ಹಾಗೂ ಪರವಾನಗಿ ಇಲ್ಲದ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಪಿಎಂಸಿ ರಕ್ಷಣಾ ಸಮಿತಿ ಅಧ್ಯಕ್ಷ ವಿಜಯಾ ಕೊಡವೂರು, ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಸುಭಾಷಿತ್ ಕುಮಾರ್, ಉಡುಪಿ ಬಿಜೆಪಿ ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಜನಧ್ವನಿ ಉಡುಪಿಯ ನಟೇಶ್, ಎಪಿಎಂಸಿ ಸದಸ್ಯ ರಮಾಕಾಂತ್ ಕಾಮತ್, ವರ್ತಕರಾದ ಪ್ರಭುಗೌಡ, ಫಯಾಜ್, ಜಗಳೂರಯ್ಯ, ರಮಾನಾಥ ಪೈ, ರಾಧಾಕೃಷ್ಣ ಮಲ್ಪೆ ಸೇರಿದಂತೆ ನಾಗರಿಕರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.