10 ನೇ ಲೇ-ಕೌನ್ಸೆಲರ್ ತರಬೇತಿ ಕಾರ್ಯಾಗಾರಕ್ಕೆ ಅ.2ರಂದು ಚಾಲನೆ : ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಲೇ-ಕೌನ್ಸೆಲರ್‌ಗಳ ಮಹತ್ವ ಏನು?

 


ಉಡುಪಿ: ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರರ ಕೊರತೆ ವಿಶ್ವದಾದ್ಯಂತ ಕಂಡುಬರುತ್ತಿದ್ದು, ಇದರ ಪರಿಣಾಮವಾಗಿ ಅನೇಕರು ಸಕಾಲಿಕ ಮಾನಸಿಕ ಆರೋಗ್ಯ ಸೇವೆ ಮತ್ತು ಸಮಾಲೋಚನೆಯನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ, ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಸಮಾಜದಲ್ಲಿರುವ ಕಳಂಕ, ತಪ್ಪು ನಂಬಿಕೆಗಳು ಹಾಗೂ ಪೂರ್ವಗ್ರಹಗಳಿಂದಾಗಿ ಹಲವರು ವೃತ್ತಿಪರರ ನೆರವು ಪಡೆಯಲು ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಮಾನಸಿಕ ಆರೋಗ್ಯದ ಅರಿವು ಮೂಡಿಸುವುದು, ಸಂಕಷ್ಟದಲ್ಲಿರುವವರಿಗೆ ಪ್ರಾಥಮಿಕ ಭಾವನಾತ್ಮಕ ಬೆಂಬಲ ನೀಡುವುದು ಹಾಗೂ ಅಗತ್ಯವಿರುವಾಗ ಅವರನ್ನು ಸೂಕ್ತ ಮಾನಸಿಕ ಆರೋಗ್ಯ ತಜ್ಞರ ಬಳಿಗೆ ಕರೆದೊಯ್ಯುವಲ್ಲಿ ಲೇ-ಕೌನ್ಸೆಲರ್‌ಗಳು ಮಹತ್ವದ ಪಾತ್ರ ವಹಿಸಬಹುದು.



ಈ ಉದ್ದೇಶದಿಂದ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಹಾಗೂ 'ಒನ್ ಗುಡ್ ಸೈಪ್' ಇವರ ಆಶ್ರಯದಲ್ಲಿ 12 ವಾರಗಳ ಲೇ-ಕೌನ್ಸೆಲರ್ ತರಬೇತಿ ಕಾರ್ಯಕ್ರಮವನ್ನು ಪ್ರತಿ ಭಾನುವಾರ ನಡೆಸಲಾಗುತ್ತಿದೆ. ಇದೀಗ 10 ನೇ ಬ್ಯಾಚ್ ನ ತರಬೇತಿ ಕಾರ್ಯಕ್ರಮವು 2026 ಅಕ್ಟೋಬರ್ 2 ರಿಂದ ಆರಂಭಗೊಳ್ಳಲಿದೆ ಎಂದು ಡಾ.ಎ.ವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ ಭಂಡಾರಿ ತಿಳಿಸಿದರು.

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಪೂರ್ವಜ್ಞಾನ ಅಥವಾ ಯಾವುದೇ ವಿಶೇಷ ತರಬೇತಿ ಹೊಂದಿರುವುದು ಈ ಕೋರ್ಸ್‌ಗೆ ಕಡ್ಡಾಯವಲ್ಲ. ಸಮಾಜದಲ್ಲಿ ಸಂಕಷ್ಟ ಮತ್ತು ಒತ್ತಡದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಹಾಗೂ ಆಸಕ್ತಿ ಹೊಂದಿರುವ ಯಾವುದೇ ವಿದ್ಯಾರ್ಹತೆಯ ವ್ಯಕ್ತಿಗಳು ಈ ತರಬೇತಿಗೆ ನೋಂದಾಯಿಸಿಕೊಳ್ಳಬಹುದು.


ಲೇ-ಕೌನ್ಸೆಲರ್‌ಗಳು ವೃತ್ತಿಪರ ಮಾನಸಿಕ ಆರೋಗ್ಯ ತಜ್ಞರ ಪರ್ಯಾಯವಲ್ಲ. ಆದರೆ, ಮಾನಸಿಕ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಸಮುದಾಯದೊಂದಿಗೆ ಸಂಪರ್ಕ ಸಾಧಿಸುವ ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸಬಹುದು. ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ತಕ್ಷಣದ ಭಾವನಾತ್ಮಕ ಬೆಂಬಲ ನೀಡುವುದು, ಅವರನ್ನು ಸಹಾನುಭೂತಿಯಿಂದ ಆಲಿಸುವುದು, ಅವರ ಅನುಭವಗಳು ಮತ್ತು ಭಾವನೆಗಳನ್ನು ಮೌಲೀಕರಿಸುವುದು ಹಾಗೂ ಅಗತ್ಯವಿದ್ಯಾಗ ವೃತ್ತಿಪರ ನೆರವು ಪಡೆಯಲು ಮಾರ್ಗದರ್ಶನ ನೀಡುವುದು ಇವರ ಪ್ರಮುಖ ಜವಾಬ್ದಾರಿಗಳಾಗಿವೆ. ಈ ತರಬೇತಿಯನ್ನು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ 'ಪ್ರಥಮ ಸಹಾಯ' ದ ದೃಷ್ಟಿಯಿಂದಲೂ ಮಹತ್ವಪೂರ್ಣವಾಗಿ ಪರಿಗಣಿಸಬಹುದು. ತರಬೇತಿಯಲ್ಲಿ ಸಕ್ರಿಯ ಆಲಿಸುವಿಕೆ, ಸಂವಹನ ಕೌಶಲ್ಯ, ಪೂರ್ವಗ್ರಹರಹಿತ ಸಂವಹನ, ಸಹಾನುಭೂತಿ ಹಾಗೂ ವ್ಯಕ್ತಿಯ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವ ಕೌಶಲ್ಯಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ. ಇದರ ಜೊತೆಗೆ ಮೆದುಳಿನ ಕಾರ್ಯವೈಖರಿ, ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳು, ಅವುಗಳ ಲಕ್ಷಣಗಳು ಮತ್ತು ಚಿಕಿತ್ಸಾ ವಿಧಾನಗಳು, ಆತ್ಮಹತ್ಯೆಯ ಆಲೋಚನೆಗಳನ್ನು ಗುರುತಿಸುವುದು ಮತ್ತು ತಡೆಗಟ್ಟುವಲ್ಲಿ ಸಹಾಯ ಮಾಡುವುದು, ವೈವಾಹಿಕ ಮತ್ತು ಆಪ್ತಸಮಾಲೋಚನೆ, ಒತ್ತಡ ನಿರ್ವಹಣೆ ಸೇರಿದಂತೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ.


ಈ ಲೇ-ಕೌನ್ಸೆಲರ್ ತರಬೇತಿ ಕಾರ್ಯಕ್ರಮವನ್ನು 2023ರ ಅಕ್ಟೋಬರ್ 2ರಂದು ನಾಡಿನ ಖ್ಯಾತ ಮನೋವೈದ್ಯ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಅವರು ಉದ್ಘಾಟಿಸಿದ್ದರು. ಈಗಾಗಲೇ ಒಂಬತ್ತು ಬ್ಯಾಚ್‌ಗಳ ತರಬೇತಿ ಪೂರ್ಣಗೊಂಡಿದ್ದು, 200ಕ್ಕೂ ಹೆಚ್ಚು ಲೇ-ಕೌನ್ಸೆಲರ್‌ಗಳು

ತರಬೇತಿ ಪಡೆದು ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದೀಗ 10ನೇ ಬ್ಯಾಚ್‌ನ ತರಬೇತಿ ಕಾರ್ಯಕ್ರಮವು 2026ರ ಅಕ್ಟೋಬರ್ 2ರಿಂದ ಆರಂಭಗೊಳ್ಳಲಿದೆ.


ಉದ್ಘಾಟನಾ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಆಡಳಿತಾತ್ಮಕ ವಿಮಾ ವೈದ್ಯಾಧಿಕಾರಿ ಹಾಗೂ ಹೆಮಂತ್ ಕುಮಾರ್ ಮಂಗಳೂರಿನ ESI ಆಸ್ಪತ್ರೆ ಸಬಲೀಕರಣದ ನೋಡಲ್ ಅಧಿಕಾರಿ ಡಾ. ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀಮತಿ ಶಶಿಕಲಾ ರಾಜವರ್ಮ, ರೋಟರಿ ಮಣಿಪಾಲ, ನಿವೃತ್ತ ಮುಖ್ಯೋಪಾಧ್ಯಾಯನಿ ಮಾಧವ ಕೃಪ ಶಾಲೆ ಮಣಿಪಾಲ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಈಗಾಗಲೇ ತರಬೇತಿ ಪಡೆದಿರುವ ಎಲ್ಲಾ ಒಂಬತ್ತು ಬ್ಯಾಚ್‌ಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ಇಲ್ಲಿಯವರೆಗೆ ಹಲವು ಶಿಕ್ಷಕರು, ವಕೀಲರು, ಬ್ಯಾಂಕ್ ಉದ್ಯೋಗಿಗಳು, ಗೃಹಿಣಿಯರು, ನಿವೃತ್ತ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹೀಗೆ ವಿವಿಧ ಸ್ತರದ ಜನರು ಭಾಗವಹಿಸಿರುವುದು ನಮ್ಮ ತರಬೇತಿಯ ವಿಶೇಷತೆಯಾಗಿದೆ. ಈ ಸಂದರ್ಭದಲ್ಲಿ ಆಳ್ವಾಸ್ ಸೆಂಟರ್ ಫಾರ್ ವೆಲ್‌ನೆಸ್ ಟ್ರೈನಿಂಗ್‌ನ ನಿರ್ದೇಶಕಿ ಹಾಗೂ ಆಳ್ವಾಸ್ ಕಾಲೇಜು, ಮೂಡುಬಿದಿರೆಯ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೀಪಾ ಕೊಠರಿ ಅವರು 'Mind Over Mobile' ಎಂಬ ವಿಷಯದ ಕುರಿತು ಮೊಬೈಲ್ ವ್ಯಸನದ ಬಗ್ಗೆ ವಿಶೇಷ ಅರಿವು ಕಾರ್ಯಾಗಾರ ನಡೆಸಲಿದ್ದಾರೆ.


ಮಾನಸಿಕ ಆರೋಗ್ಯದ ಸಮಸ್ಯೆಗಳು ಕೇವಲ ಆಸ್ಪತ್ರೆ ಅಥವಾ ವೃತ್ತಿಪರರ ವ್ಯಾಪ್ತಿಗೆ ಸೀಮಿತವಾಗಿರದೆ, ಕುಟುಂಬ, ಶಾಲೆ, ಕೆಲಸದ ಸ್ಥಳ ಹಾಗೂ ಸಮುದಾಯದ ಮಟ್ಟದಲ್ಲಿಯೂ ಪರಿಣಾಮ ಬೀರುತ್ತವೆ. ಆದ್ದರಿಂದ ಜನಸಾಮಾನ್ಯರಲ್ಲಿ ಮಾನಸಿಕ ಆರೋಗ್ಯದ ಕುರಿತು ಸರಿಯಾದ ತಿಳುವಳಿಕೆ ಮೂಡಿಸುವುದು, ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ಮತ್ತು ಅಗತ್ಯವಿರುವವರಿಗೆ ಸೂಕ್ತ ಸೇವೆಗಳೊಂದಿಗೆ ಸಂಪರ್ಕ ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತರಬೇತಿ ಪಡೆದ ಲೇ-ಕೌನ್ಸೆಲರ್‌ಗಳು ಸಮುದಾಯದಲ್ಲಿ ಪ್ರಮುಖ ಸಹಾಯಕ ಶಕ್ತಿಯಾಗಿ ಕಾರ್ಯನಿರ್ವಹಿಸಬಹುದು.


ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯನ್ನು ತೀರ್ಪು ನೀಡದೆ ಆಲಿಸುವುದು, ಅವರ ಮಾತುಗಳಿಗೆ ಗೌರವ ನೀಡುವುದು ಮತ್ತು ಅಗತ್ಯವಿದ್ದಾಗ ಸೂಕ್ತ ವೃತ್ತಿಪರ ನೆರವಿನತ್ತ ಮಾರ್ಗದರ್ಶನ ಮಾಡುವುದು ಪ್ರತಿಯೊಬ್ಬರಿಗೂ ಕಲಿಯಬಹುದಾದ ಮಹತ್ವದ ಕೌಶಲ್ಯವಾಗಿದೆ. ಈ ತರಬೇತಿಯ ಮೂಲಕ ಇಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅವಕಾಶ ದೊರೆಯಲಿದೆ.


ತರಬೇತಿಗೆ ಸೇರಲು ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಅಥವಾ ಮಾನಸಿಕ ಆರೋಗ್ಯ ಕ್ಷೇತ್ರದ ಪೂರ್ವಜ್ಞಾನ ಅಗತ್ಯವಿಲ್ಲ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಮತ್ತು ಆಸಕ್ತಿ ಹೊಂದಿರುವವರು ತರಬೇತಿಗೆ ನೋಂದಾಯಿಸಿಕೊಳ್ಳಬಹುದು. ಆಸಕ್ತರು ತಮ್ಮ ಬಿಡುವಿನ ಸಮಯವನ್ನು ಮೀಸಲಿಟ್ಟು ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯ ಕೆ. ಶೆಟ್ಟಿ, ಹಾಗೂ 'ಒನ್ ಗುಡ್ ಸೈಪ್' ನ ಶ್ರೀಮತಿ ಅಮಿತಾ ಪೈ ಅವರನ್ನು ಸಂಪರ್ಕಿಸಬಹುದು.

 (9538886291/9986411788)


ಸುದ್ದಿಗೋಷ್ಠಿಯಲ್ಲಿ ಡಾ.ಮಾನಸ್ ,ನಾಗರಾಜ್ ,ಸೌಜನ್ಯ ಶೆಟ್ಟಿ ,ಅಲ್ಕಾ ಪೈ , ರಾಘವೇಂದ್ರ ರಾವ್ ಉಪಸ್ಥಿತರಿದ್ದರು.