ಉಡುಪಿ: ಬಸ್ ಕದ್ದು ಹಾಡಿಯಲ್ಲಿ ಬಿಟ್ಟು ಹೋಗಿರುವ ದುಷ್ಕರ್ಮಿಗಳು ! ವಶಕ್ಕೆ ಪಡೆದು ತನಿಖೆಗಿಳಿದ ಪೊಲೀಸರು

 


ಉಡುಪಿ: ಹನುಮಾನ್ ಪೆಟ್ರೋಲ್ ಬಂಕ್‌ ಹಿಂಭಾಗದಲ್ಲಿ ನಿಲ್ಲಿಸಿದ್ದ ಸುಮಾರು ₹40 ಲಕ್ಷ ಮೌಲ್ಯದ ಶ್ರೀ ದುರ್ಗಾಂಬ ಬಸ್‌ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳುವಾದ ಬಸ್‌ನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಕಟ್‌ಬೆಳ್ತೂರು ನಿವಾಸಿ ಕೃಷ್ಣ (51) ಅವರು ಉಡುಪಿ ನಗರ ಠಾಣೆಗೆ ನೀಡಿದ ದೂರಿನಂತೆ, KA 20 AD 1931 ನೋಂದಣಿ ಸಂಖ್ಯೆಯ ಶ್ರೀ ದುರ್ಗಾಂಬ ಬಸ್‌ನ ನಿರ್ವಾಹಕರಾಗಿದ್ದು, ಚಾಲಕ ರಾಹೀಜ್ ಉಚ್ಚಿಲ ಅವರೊಂದಿಗೆ ಸೆ.28ರಂದು ರಾತ್ರಿ 9.48ರ ಸುಮಾರಿಗೆ ಬಸ್‌ನ್ನು ಹನುಮಾನ್ ಪೆಟ್ರೋಲ್ ಬಂಕ್‌ ಹಿಂಭಾಗದಲ್ಲಿ ನಿಲ್ಲಿಸಿದ್ದರು. ಬಳಿಕ ರಾತ್ರಿ 10 ಗಂಟೆಗೆ ಸ್ಕೂಟರ್‌ನಲ್ಲಿ ಅಲ್ಲಿಂದ ತೆರಳಿದ್ದರು.

ಸೆ.29ರಂದು ಬೆಳಗ್ಗೆ ಎಂದಿನಂತೆ ಬಂಕ್‌ಗೆ ಬಂದಾಗ ಬಸ್‌ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಬಸ್‌ ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು, ಸೆ.29ರಂದು ಮುಂಜಾನೆ ಸುಮಾರು 2 ಗಂಟೆಗೆ ಇಬ್ಬರು ಅಪರಿಚಿತರು ಸ್ಕೂಟರ್‌ನಲ್ಲಿ ಚಿಟ್ಪಾಡಿಯ ಹನುಮಾನ್ ಗ್ಯಾರೇಜ್‌ಗೆ ಬಂದು, ಬಳಿಕ ಬಸ್‌ನ್ನು ಕಳವು ಮಾಡಿಕೊಂಡು ಹೋಗಿರುವುದನ್ನು ಪತ್ತೆಹಚ್ಚಿದ್ದಾರೆ. ನಂತರ ಮುದುರಂಗಡಿ ಸಮೀಪದ ಮುದ್ದಾಡಿ ಹಾಡಿಯಲ್ಲಿ ಬಸ್‌ನ್ನು ಬಿಟ್ಟು ಹೋಗಿರುವುದು ಪತ್ತೆಯಾಗಿದ್ದು, ಪೊಲೀಸರು ಬಸ್‌ನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.