ಕಾರ್ಕಳ: ಫೇಸ್‌ಬುಕ್‌ ಹಾಗೂ ವಾಟ್ಸಾಪ್ ಗ್ರೂಪ್ ಮೂಲಕ ಹೆಚ್ಚಿನ ಲಾಭದ ಆಮಿಷ ಒಡ್ಡಿ ವ್ಯಕ್ತಿಗೆ 32.68 ರೂ.ವಂಚನೆ

ಸಾಂದರ್ಭಿಕ ಚಿತ್ರ

 

ಕಾರ್ಕಳ: ಫೇಸ್‌ಬುಕ್‌ನಲ್ಲಿ ಬಂದ ವಿಡಿಯೋ ಹಾಗೂ ವಾಟ್ಸಾಪ್ ಗ್ರೂಪ್ ಮೂಲಕ ಷೇರು ಮತ್ತು ಐಪಿಒಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 32.68 ಲಕ್ಷ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ವರದಿಯಾಗಿದೆ.

ಕಾರ್ಕಳದ ಲಕ್ಷ್ಮಣ್ ಅವರಿಗೆ ಜು.17ರಂದು ಫೇಸ್‌ಬುಕ್‌ನಲ್ಲಿ 'ಜೆಬಿ (ಜೂಲಿಯಸ್ ಬೇರ್ ವಿಐಪಿ ಗ್ರೂಪ್)' ಮತ್ತು '5 ಪೈಸಾ' ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭಾಂಶ ನೀಡುವುದಾಗಿ ಹೇಳುವ ವಿಡಿಯೋ ಬಂದಿತ್ತು. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಅವರು ಸಂಬಂಧಪಟ್ಟ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದರು.


ಗ್ರೂಪ್‌ನಲ್ಲಿದ್ದ ಅಪರಿಚಿತರು ಹೆಚ್ಚಿನ ಲಾಭಾಂಶ ನೀಡುವ ಷೇರುಗಳು ಹಾಗೂ ಐಪಿಒಗಳಲ್ಲಿ ಹೂಡಿಕೆ ಮಾಡುವಂತೆ ಸೂಚಿಸಿದ್ದರು. ಇದನ್ನು ನಂಬಿದ ಲಕ್ಷ್ಮಣ್ ಅವರು ಜು.17ರಿಂದ ಆಗಸ್ಟ್ 4ರವರೆಗೆ ಹಂತ ಹಂತವಾಗಿ ಒಟ್ಟು 32,68,000 ರೂ. ಹಣವನ್ನು ವರ್ಗಾಯಿಸಿದ್ದರು.


ಆದರೆ ಹಣ ಹೂಡಿಕೆ ಮಾಡಿದ ಬಳಿಕ ಹೂಡಿಕೆ ಮೊತ್ತವಾಗಲಿ, ಲಾಭಾಂಶವಾಗಲಿ ಹಿಂದಿರುಗಿಸದೆ ಅಪರಿಚಿತರು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಲಕ್ಷ್ಮಣ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಐಟಿ ಕಾಯ್ದೆ ಸೆಕ್ಷನ್ 66(ಡಿ) ಹಾಗೂ ಬಿಎನ್‌ಎಸ್ ಸೆಕ್ಷನ್ 318(4) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.