ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಉಡುಪಿಯ ಶ್ಯಾಮಿಲಿ ಸಭಾಭವನದಲ್ಲಿ ನಡೆದ "ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶರು ಮತ್ತು ಸದಸ್ಯಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿಯ ನಿತಿನ್ ಬಿ ರಾವ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಾದಕ ವಸ್ತುಗಳು ನಮ್ಮ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತವೆ. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬವಲ್ಲದೆ ಸಮಾಜದ ಮೇಲು ಕೆಟ್ಟ ಪರಿಣಾಮ ಬೀರುತ್ತದೆ. ಇವುಗಳ ಸೇವನೆಯಿಂದ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದರ ಜತೆಗೆ ಸಾಮಾಜಿಕ ಬದುಕಿಗೆ ಮಾರಕವಾಗುತ್ತದೆ. ಇಂತಹ ಮಾದಕ ವ್ಯಸನಗಳಿಂದ ನಾವೆಲ್ಲರೂ ಸದಾ ದೂರವಿರಬೇಕು. ತಾತ್ಕಾಲಿಕ ಖುಷಿ, ಕುತೂಹಲ ಅಥವಾ ಸ್ಟೈಲ್ ಗಾಗಿ ಆರಂಭವಾಗುವ ಮಾದಕ ವ್ಯಸನವು ಕೊನೆಗೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಾಶಮಾಡುವ ಮಾರಕ ರೋಗವಾಗಿದೆ. ವಿದ್ಯಾರ್ಥಿಗಳು ಸ್ನೇಹಿತರ ಒತ್ತಡ ಅಥವಾ ಕುತೂಹಲಕ್ಕೆ ಒಳಗಾಗಿ ಯಾವುದೇ ಮಾದಕ ವಸ್ತುಗಳ ಸೇವನೆ ಮಾಡಬಾರದು ಎಂದು ಸಲಹೆ ನೀಡಿದರು.
ಜಾಗೃತಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ "ಉಡುಪಿ ಜಿಲ್ಲೆ ಮಾದಕ ವ್ಯಸನದಲ್ಲಿ ತೀವ್ರ ನಿಗಾ ಪಟ್ಟಿಯಲ್ಲಿದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಲು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವಂತೇ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ "ಸಾಮಾಜಿಕ ಜಾಲತಾಣಗಳ ಮೂಲಕ ಇಂದಿನ ಯುವಜನತೆ ಶೋಕಿಗಾಗಿ ಮಾದಕ ವ್ಯಸನದ ದಾಸರಾಗುತ್ತಿದ್ದು ಇದರಿಂದ ಅವರ ವೈಯುಕ್ತಿಕ ಬದುಕಿಗೆ, ಸಮಾಜಕ್ಕೆ ತೊಂದರೆ ಉಂಟಾಗುತ್ತದೆ. ಮಾದಕ ವ್ಯಸನಿಗಳನ್ನು ದೇಶದ್ರೋಹದ ಕೃತ್ಯಕ್ಕೆ ಕೂಡ ಬಳಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ, ಬಳಕೆ ಮತ್ತು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಕ್ಯುಆರ್ ಕೋಡ್ ಆರಂಭಿಸಲಾಗಿದೆ. ಈ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಕೂಡಲೇ ಕ್ಯುಆರ್ ಕೋಡ್ ಮೂಲಕ ಮಾಹಿತಿ ನೀಡಲು ಅವಕಾಶ ಇದ್ದು ಇಲ್ಲಿಯ ತನಕ 205 ಮಾಹಿತಿಗಳನ್ನು ಸ್ವೀಕರಿಸಿ 42 ಪ್ರಕರಣಗಳನ್ನು ದಾಖಲಿಸಲಾಗಿದೆ. ಜಿಲ್ಲೆಯನ್ನು ವ್ಯಸನ ಮುಕ್ತವಾಗಿಸಲು ಪ್ರತಿಯೊಬ್ಬರು ಕೈ ಜೋಡಿಸುವಂತೆ ಮನವಿ ಮಾಡಿದರು.
ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯ್ಕ ಮಾದಕ ವ್ಯಸನದ ವಿರುದ್ದ ಪ್ರತಿಜ್ಞಾವಿಧಿ ಭೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಅಶೋಕ್ ಕುಮಾರ್, ಬಾಳಿಗಾ ಆಸ್ಪತ್ರೆ ನಿರ್ದೇಶಕರಾದ ಡಾ. ಪಿ ವಿ ಭಂಡಾರಿ, ಮಾತಾ ಆಸ್ಪತ್ರೆ ಕುಂದಾಪುರ ವೈದ್ಯರಾದ ಪ್ರಕಾಶ್ ತೋಳಾರ್, ಯುವಜನ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
