ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಘೋರ ಅಪರಾಧ : ಮೌನ ಮುರಿದ ಪ್ರಧಾನಿ ಮೋದಿ

 


ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಘೋರ ಅಪರಾಧ ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಶ್ನೆ ಪತ್ರಿಕೆ ಸೋರಿಕೆ ಬಯಲಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಮತ್ತೆಂದೂ ಮರುಕಳಿಸಬಾರದು ಎಂದಿದ್ದಾರೆ.ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿರುವ ಅವರು, ಪ್ರಕರಣದಲ್ಲಿ ಭಾಗಿಯಾದವರನ್ನೆಲ್ಲ ಬಂಧಿಸಲಾಗಿದೆ. ಸದ್ಯ, 13 ಮಂದಿ ಕಸ್ಟಡಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬಯಲಾಗುತ್ತಿದ್ದಂತೆ ಸರ್ಕಾರ ಕ್ರಮ ಕೈಗೊಂಡಿದ್ದು, 13 ಜನರನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಆಕಾಂಕ್ಷಿಗಳ ಭವಿಷ್ಯದ ಸುರಕ್ಷತೆ ದೃಷ್ಟಿಯಿಂದ ಮರುಪರೀಕ್ಷೆ ನಡೆಸಿ ಫಲಿತಾಂಶ ನೀಡಲಾಗಿದೆ ಎಂದಿದ್ದಾರೆ.

ಇನ್ನೆಂದೂ ಇಂತಹ ಘಟನೆ ನಡೆಯಬಾರದೆಂಬ ಉದ್ದೇಶದಿಂದಲೇ ಸರ್ಕಾರ ತ್ವರಿತ ಕ್ರಮಕೈಗೊಂಡಿದೆ. ಅಪರಾಧಿಗಳಿಗೆ ಸಾಧ್ಯವಾದಷ್ಟೂ ಕಠಿಣ ಶಿಕ್ಷೆಗೆ ಪ್ರಧಾನಿ ಸೂಚಿಸಿದ್ದಾರೆ. ಆಗ ಮಾತ್ರ, ಭವಿಷ್ಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ತಡೆ ಹಾಕಬಹುದು ಮತ್ತು ಪರೀಕ್ಷೆಗಳ ಘನತೆ ಕಾಪಾಡಬಹುದು ಎಂದಿದ್ದಾರೆ.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಹಿರಂಗವಾದ ಬಳಿಕ ಪರೀಕ್ಷೆ ರದ್ದುಮಾಡಲಾಗಿತ್ತು. ಪರೀಕ್ಷೆ ರದ್ದಾದ ಬಳಿಕ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಮರುಪರೀಕ್ಷೆ ನಡೆಸಿ ಇತ್ತೀಚೆಗೆ ಫಲಿತಾಂಶ ಹೊರಬಿದ್ದಿತ್ತು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷವು ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದೆ. ಈ ಪ್ರತಿಭಟನೆ ಬೆಂಬಲಿಸಿ ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಟಕ್ ಉಪವಾಸ ಸತ್ಯಾಗ್ರಹ ನಡೆಸಿದ್ದರು.