ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ್ರಾಣಿ ಪ್ರೇಮಿ ಸುಧೀಂದ್ರ ಐತಾಳ್ ನಡೆಸುತ್ತಿರುವ ಪ್ರಾಣಿ ಸಂರಕ್ಷಣಾ ಕೇಂದ್ರದ ಮೇಲೆ ಪೇಟಾ (PETA) ಕಾರ್ಯಕರ್ತರು ಮತ್ತೊಮ್ಮೆ ದಾಳಿ ನಡೆಸಿದ್ದಾರೆ.
ಅನಾರೋಗ್ಯ ಹಾಗೂ ಗಾಯಗೊಂಡ ನಾಯಿ-ಬೆಕ್ಕುಗಳಿಗೆ ಆಶ್ರಯ ನೀಡಲಾಗುತ್ತಿದ್ದ ಈ ಕೇಂದ್ರದಲ್ಲಿ ಸೂಕ್ತ ನಿರ್ವಹಣೆ ಮತ್ತು ಶುಚಿತ್ವದ ಕೊರತೆ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಪೇಟಾ ಕಾರ್ಯಕರ್ತರೊಂದಿಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪೌರ ಸಿಬ್ಬಂದಿ, ಕೋಟ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯತ್ ಆರೋಗ್ಯಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಈ ಹಿಂದೆಯೂ ಇದೇ ಕೇಂದ್ರದ ಮೇಲೆ ಪೇಟಾ ದಾಳಿ ನಡೆಸಿ ಹಲವು ಪ್ರಾಣಿಗಳನ್ನು ವಶಕ್ಕೆ ಪಡೆದಿತ್ತು. ಇದೀಗ ಮತ್ತೊಮ್ಮೆ ನಡೆಸಿದ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ನಾಯಿ ಮತ್ತು ಬೆಕ್ಕಿನ ಮರಿಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿರುವುದಾಗಿ ತಿಳಿದುಬಂದಿದೆ.


