ಉಡುಪಿ: ಗ್ರಾಹಕ ಆಯೋಗದ ಆದೇಶವನ್ನು ಉಲ್ಲಘಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ಅಮೃತ್ ಶೆಣೈ ಅವರಿಗೆ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಜಾಮೀನು ಮಂಜೂರು ಮಾಡಿದೆ.
ಬಂಧಿತರ ಆರೋಗ್ಯದ ಹಿನ್ನೆಲೆ
ಹಾಗೂ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ಹೊರಡಿಸುವಾಗ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಇರುವುದನ್ನು ಪ್ರಶ್ನಿಸಿ ಜಾಮೀನು ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ರಾಜ್ಯ ಗ್ರಾಹಕ ಆಯೋಗವು, ಒಂದು ಲಕ್ಷ ರೂ. ಠೇವಣಿ ಹಾಗೂ ಶೂರಿಟಿ ಒದಗಿಸುವ ಷರತ್ತಿನ ಮೇರೆಗೆ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಗ್ರಾಹಕ ಆಯೋಗವು ಜೈಲುವಾಸ ವಿಧಿಸಿರುವುದನ್ನು ರಾಜ್ಯ ಗ್ರಾಹಕ ಆಯೋಗವು ತಡೆ ಹಿಡಿದಿದೆ. ಉಡುಪಿಯ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲಾಟ್ ಅನ್ನು ಸಂತೋಷ್ ಪೈ ಎಂಬವರಿಗೆ ನೋಂದಣಿ ಮಾಡಿಕೊಡಲು ಅಮೃತ್ ಶೆಣೈ ಅವರು ವಿಫಲರಾಗಿದ್ದರು. ಅದಕ್ಕಾಗಿ ಸಂತೋಷ್ ಪೈ ಅವರು ಜಿಲ್ಲಾ ಗ್ರಾಹಕ ಆಯೋಗದಲ್ಲಿ ದಾವೆ ಹೂಡಿದ್ದರು, ವಿಚಾರಣೆ ಬಳಿಕ ಶೆಣೈ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಬಂಧಿಸಲಾಗಿತ್ತು.
