ಕೊಲ್ಲೂರು: ದೇವಸ್ಥಾನದಲ್ಲಿ ಭಕ್ತೆಯ ₹80 ಸಾವಿರ ಕಳವು: ಮೂವರು ಕಳ್ಳಿಯರ ಬಂಧನ


 

ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ಪರ್ಸ್‌ನಲ್ಲಿದ್ದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು ಪೊಲೀಸರು ದಾಖಲಾದ 24 ಗಂಟೆಯೊಳಗೆ ಭೇದಿಸಿ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ.

ಜುಲೈ 5ರಂದು ನಿಮಿಶಾ ಹಾಗೂ ಅವರ ಪತಿ ಪ್ರಜೋಶ್ ದೇವರ ದರ್ಶನ ಮುಗಿಸಿ ದೇವಸ್ಥಾನದ ಹೊರಾಂಗಣಕ್ಕೆ ಬಂದ ವೇಳೆ,  ನಿಮಿಶಾ ಅವರ ಕಂದು ಬಣ್ಣದ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಬ್ಯಾಗ್‌ನಲ್ಲಿದ್ದ ಪರ್ಸ್ ಹಾಗೂ ಅದರೊಳಗಿನ ₹80 ಸಾವಿರ ನಗದು ಕಾಣೆಯಾಗಿರುವುದು ತಿಳಿದುಬಂದಿದೆ.

ದೇವಸ್ಥಾನ ಆವರಣದಲ್ಲಿ ಹುಡುಕಾಟ ನಡೆಸಿದರೂ ಪರ್ಸ್ ಅಥವಾ ಹಣ ಪತ್ತೆಯಾಗದ ಹಿನ್ನೆಲೆಯಲ್ಲಿ ನಿಮಿಶಾ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 43/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು.

 ಪೊಲೀಸ್ ತಂಡ ಸಿಸಿಟಿವಿ ದೃಶ್ಯಾವಳಿ, ಸಾರ್ವಜನಿಕರು ತೆಗೆದ ಛಾಯಾಚಿತ್ರಗಳು ಮತ್ತು ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿತು.

ಬಂಧಿತ ಆರೋಪಿಗಳನ್ನು ನೇತ್ರಾವತಿ (33), ಶಾರದ (50) ಹಾಗೂ ದುರ್ಗಮ್ಮ (44) ಎಂದು ಗುರುತಿಸಲಾಗಿದ್ದು, ಇವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿಗಳಾಗಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ದುರ್ಗಮ್ಮ ವಿರುದ್ಧ ಈಗಾಗಲೇ ಎರಡು ಕಳವು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಒಂದು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಹಾಗೂ ಮತ್ತೊಂದು ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇನ್ನು ಶಾರದ ವಿರುದ್ಧ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಒಂದು ಸೇರಿ ಒಟ್ಟು ಮೂರು ಕಳವು ಪ್ರಕರಣಗಳು ದಾಖಲಾಗಿವೆ.