ಉಡುಪಿ ಜಿಲ್ಲೆಯಲ್ಲಿ ಶಾಲಾ ವಾಹನಗಳ ವಿಶೇಷ ತಪಾಸಣೆ: 203 ಪ್ರಕರಣ ದಾಖಲು; ₹71 ಸಾವಿರ ದಂಡ ವಸೂಲಿ


 

ಉಡುಪಿ: ಶಾಲಾ ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಮಂಗಳವಾರ ಜಿಲ್ಲೆಯಾದ್ಯಂತ ಶಾಲಾ ವಾಹನಗಳ ವಿಶೇಷ ತಪಾಸಣಾ (Special Drive) ಕಾರ್ಯಾಚರಣೆ ನಡೆಸಲಾಯಿತು.



ಸಾರ್ವಜನಿಕರಿಂದ ಬಂದ ಅಹವಾಲುಗಳು ಹಾಗೂ ಜುಲೈ 4ರಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ನೀಡಿದ ಸೂಚನೆಯ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಯಿತು.



ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶಾಲಾ ಬಸ್ ಗಳು, ವ್ಯಾನ್ ಗಳು, ಆಟೋರಿಕ್ಷಾಗಳು ಸೇರಿದಂತೆ ಶಾಲಾ ಮಕ್ಕಳನ್ನು ಶಾಲೆಗೆ ಕರೆತರುವ ಹಾಗೂ ಮನೆಗೆ ಕರೆದೊಯ್ಯುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಯಿತು.


ತಪಾಸಣೆ ವೇಳೆ ವಾಹನಗಳ ದಾಖಲೆಗಳು, ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಚಾಲನಾ ಪರವಾನಗಿ, ಶಾಲಾ ವಾಹನಗಳಿಗೆ ಕಡ್ಡಾಯವಾಗಿರುವ ಸುರಕ್ಷತಾ ಮಾನದಂಡಗಳು, ಅಗ್ನಿಶಾಮಕ ಉಪಕರಣ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ತುರ್ತು ನಿರ್ಗಮನ ವ್ಯವಸ್ಥೆ ಹಾಗೂ ನಿಗದಿತ ಸಂಖ್ಯೆಗೆ ಮೀರಿದ ಮಕ್ಕಳನ್ನು ಸಾಗಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಯಿತು.



ಸಂಚಾರ ನಿಯಮಗಳು ಹಾಗೂ ಶಾಲಾ ವಾಹನ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ವಾಹನ ಚಾಲಕರು, ನಿರ್ವಾಹಕರು ಹಾಗೂ ಶಾಲಾ ಆಡಳಿತ ಮಂಡಳಿಗೆ ಮಕ್ಕಳ ಸುರಕ್ಷತೆಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.


ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಧಕ್ಕೆ ಉಂಟುಮಾಡುವ ಅತಿಯಾದ ಮಕ್ಕಳ ಸಾಗಾಟ, ದಾಖಲೆಗಳ ಕೊರತೆ, ಸುರಕ್ಷತಾ ಸಾಧನಗಳ ಅಭಾವ ಸೇರಿದಂತೆ ಇತರೆ ನಿಯಮ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ವಿಶೇಷ ತಪಾಸಣಾ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.


ವಿಶೇಷ ತಪಾಸಣೆಯ ವಿವರಗಳು

ಪರಿಶೀಲಿಸಿದ ಒಟ್ಟು ವಾಹನಗಳು: 483

ಅತಿಯಾದ ಮಕ್ಕಳನ್ನು ಸಾಗಿಸಿದ ಪ್ರಕರಣಗಳು: 112

ಸಮವಸ್ತ್ರ ಧರಿಸದೇ ವಾಹನ ಚಲಾಯಿಸಿದ ಚಾಲಕರು: 58

ಇತರೆ ನಿಯಮ ಉಲ್ಲಂಘನೆಗಳು: 33

ಒಟ್ಟು ದಾಖಲಾಗಿದ ಪ್ರಕರಣಗಳು: 203

ಒಟ್ಟು ವಸೂಲಾದ ದಂಡ: ₹71,000