ಹಿರಿಯ ನಿರ್ದೇಶಕ, ಪತ್ರಕರ್ತ, ಸೃಜನಶೀಲ ಲೇಖಕ ಎನ್.ಎಸ್. ಶಂಕರ್ ಇನ್ನಿಲ್ಲ

 


ಬೆಂಗಳೂರು: ಕನ್ನಡ ಚಿತ್ರರಂಗದ  ಹಿರಿಯ ನಿರ್ದೇಶಕ, ಪತ್ರಕರ್ತ, ಸೃಜನಶೀಲ ಲೇಖಕ ಎನ್.ಎಸ್. ಶಂಕರ್ ಅವರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಅವರ ನಿಧನದಿಂದ ಕನ್ನಡ ಸಿನಿಮಾ, ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಕೊಂಡಿಯೊಂದು ಕಳಚಿದಂತಾಗಿದೆ. ಚಿತ್ರರಂಗ, ಮಾಧ್ಯಮ ಕ್ಷೇತ್ರ ಹಾಗೂ ಸಾಹಿತ್ಯ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮೂಲತಃ ಪತ್ರಕರ್ತರಾಗಿದ್ದ ಎನ್.ಎಸ್. ಶಂಕರ್ ಅವರು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ಲಂಕೇಶ್ ಪತ್ರಿಕೆಯ ಒಡನಾಟದಲ್ಲಿ ಬೆಳೆದ ಅವರು ತೀಕ್ಷ್ಣ ಬರಹಗಳ ಮೂಲಕ ಗುರುತಿಸಿಕೊಂಡಿದ್ದರು. ಕೇವಲ ಪತ್ರಿಕೋದ್ಯಮಕ್ಕೆ ಸೀಮಿತವಾಗದ ಶಂಕರ್, ಸಾಂಸ್ಕೃತಿಕ ಚಳವಳಿಗಳು ಮತ್ತು ಬಂಡಾಯ ಸಾಹಿತ್ಯದ ತತ್ವಗಳಿಗೆ ಸದಾ ಧ್ವನಿಯಾಗಿದ್ದರು.

ಎನ್.ಎಸ್. ಶಂಕರ್ ಅವರು ತಮ್ಮ ಚೊಚ್ಚಲ ಸಿನಿಮಾ ‘ಉಲ್ಟಾ ಪಲ್ಟಾ’ (1997) ಮೂಲಕ ಇಡೀ ಸ್ಯಾಂಡಲ್‌ವುಡ್ ತಿರುಗಿ ನೋಡುವಂತೆ ಮಾಡಿದ್ದರು. ವಿಲಿಯಂ ಶೇಕ್ಸ್‌ಪಿಯರ್ ಅವರ ಪ್ರಸಿದ್ಧ ಕೃತಿ ‘ದಿ ಕಾಮಿಡಿ ಆಫ್ ಎರರ್ಸ್’ ಆಧಾರಿತ ಈ ಹಾಸ್ಯ ಪ್ರಧಾನ ಚಿತ್ರ ಕನ್ನಡ ಸಿನೆಮಾ ಇತಿಹಾಸದಲ್ಲಿ ಒಂದು ವಿಶಿಷ್ಟ ಮೈಲಿಗಲ್ಲಾಗಿ ಉಳಿದಿದೆ.