13 ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ಜವಾನ್ದಾರಿ ಹಂಚಿಕೆ : ಯು.ಟಿ.ಖಾದರ್ ಗೆ 4 ಜಿಲ್ಲೆಗಳ ಉಸ್ತುವಾರಿ

 


ಬೆಂಗಳೂರು:ಸಿಎಂ ಡಿ.ಕೆ. ಶಿವಕುಮಾರ್​ ನೇತೃತ್ವದ ಸಂಪುಟ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಹಂಚಿಕೆ ಮಾಡಿ ಆದೇಶಿಸಲಾಗಿದೆ. 13 ಸಚಿವರಿಗೆ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಲಾಗಿದೆ.

ಡಿಸಿಎಂ ಡಾ.ಜಿ. ಪರಮೇಶ್ವರ್​ ಅವರಿಗೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಇನ್ನು ಸಚಿವ ಕೆ.ಹೆಚ್. ಮುನಿಯಪ್ಪ ಅವರಿಗೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರದ ಉಸ್ತುವಾರಿ ನೀಡಲಾಗಿದೆ. ಸಚಿವ ರಾಮಲಿಂಗರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಹಂಚಿಕೆ ಮಾಡಲಾಗಿದೆ.

ಸಚಿವ ಎಂ.ಬಿ. ಪಾಟೀಲ್​ ಅವರಿಗೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ, ಸಚಿವ ಕೆ.ಜೆ. ಜಾರ್ಜ್ ಅವರಿಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ.‌ ಸಚಿವ ಕೃಷ್ಣ ಬೈರೇಗೌಡರಿಗೆ ಬೆಂಗಳೂರು ನಗರ ಮತ್ತು ಹಾಸನ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.ಸಚಿವ ಈಶ್ವರ ಖಂಡ್ರೆ ಅವರಿಗೆ ಬೀದರ್ ಮತ್ತು ಗದಗ ಜಿಲ್ಲೆಗಳು, ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳು, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳನ್ನು ಹಂಚಲಾಗಿದೆ.

ಹಾಗೇ, ಸಚಿವ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್​ ಅವರಿಗೆ ರಾಯಚೂರು ಮತ್ತು ಕೊಪ್ಪಳ, ಸಚಿವ ಯು.ಟಿ. ಖಾದರ್​ಗೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಹಂಚಿಕೆ ಮಾಡಲಾಗಿದೆ. ಸಚಿವ ಬೈರತಿ ಸುರೇಶ್​ ಅವರಿಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೇ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.