ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಅಲಿಪೋರ್ ನಲ್ಲಿರುವ ಒಂಭತ್ತು ಅಂತಸ್ತಿನ ಸರ್ಕಾರಿ ಕಟ್ಟಡದಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಸುಮಾರು 4,000 ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಸುಟ್ಟುಹೋಗಿವೆ. ಘಟನೆಗೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸೌತ್ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದ ಈ ಕಟ್ಟಡದಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿತ್ತು. ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 10 ಕ್ಷೇತ್ರಗಳಲ್ಲಿ ಬಳಸಲಾಗಿದ್ದ ಸುಮಾರು 4,000 EVMಗಳು ಬೆಂಕಿಯಲ್ಲಿ ನಾಶವಾಗಿವೆ ಎಂದು ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಕೌಶಿಕ್ ಚೌಧರಿ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, "ಇದು ಸಾಮಾನ್ಯ ಬೆಂಕಿಯಂತೆ ಕಾಣುತ್ತಿಲ್ಲ. ಘಟನೆಯ ಹಿಂದೆ ಯಾವುದೋ ವಿಧ್ವಂಸಕ ಕೃತ್ಯ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ' ಎಂದು ಹೇಳಿದರು.
ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಆದರೆ ನಾಲ್ಕನೇ, ಐದನೇ ಮತ್ತು ಆರನೇ ಮಹಡಿಗಳಿಗೆ ಹೆಚ್ಚಿನ ಹಾನಿಯಾಗದೆ, ಏಳನೇ, ಎಂಟನೇ, ಒಂಭತ್ತನೇ ಹಾಗೂ ಹತ್ತನೇ ಮಹಡಿಗಳಿಗೆ ಬೆಂಕಿ ಹೇಗೆ ವ್ಯಾಪಿಸಿತು ಎಂಬುದು ತನಿಖೆಯ ವಿಷಯವಾಗಿದೆ ಎಂದು ಸಚಿವರು ಹೇಳಿದರು.
ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿರುವುದಾಗಿ ಅವರು ತಿಳಿಸಿದರು.
